ಪುತ್ತೂರು (ದಕ್ಷಿಣ ಕನ್ನಡ) : ಅಡಿಕೆ ಕ್ಯಾನ್ಸರ್ ಕಾರಕ ಎಂಬ ಆಪಾದನೆ ಇರುವ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಅದು ಮುಂದಿನ ವಿಚಾರಣೆಗೆ ಬರುವ ಸಂದರ್ಭ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ಸಂಶೋಧನಾ ವರದಿಯನ್ನು ಸಲ್ಲಿಸಲಾಗುವುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು. ಶನಿವಾರ ಪುತ್ತೂರಿನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂಬುದನ್ನು ಸಂಶೋಧನೆ ಮಾಡುವ ಬಗ್ಗೆ ನಿಟ್ಟೆ ವಿಶ್ವವಿದ್ಯಾಲಯದ ಜೊತೆ ವರ್ಷದ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ಸಂಶೋಧನೆ ಕೂಡ ನಡೆಯುತ್ತಿದೆ. ಅದೇ ರೀತಿ ಬೆಂಗಳೂರಿನ ರಾಮ ಇನ್‌ಸ್ಟಿಟ್ಯೂಟ್ ಜೊತೆಗೂ ಕೂಡ 2 ವರ್ಷಗಳ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಸಾಬೀತು ಪಡಿಸಲು ಸಂಶೋಧನೆ ನಡೆಯುತ್ತಿದೆ. ಹಂತ ಹಂತವಾಗಿ ವರದಿಗಳು ಬರುತ್ತಿದ್ದು, ನ್ಯಾಯಾಲಯದ ಮುಂದಿನ ವಿಚಾರಣೆ ವೇಳೆ ಈ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ವಿಮಾನ ಘಟನೆ ಬಗ್ಗೆ ಸಷ್ಟನೆ ಕೊಡಲಾಗಿದೆ.. ಕಾಂಗ್ರೆಸ್ ಟೀಕೆಯನ್ನು ವೈಭವೀಕರಿಸಲ್ಲ: ತೇಜಸ್ವಿ ಸೂರ್ಯ
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ರೂಪಿಸಲಾದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್‌ಡಿಎಫ್) ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದೆ. ರೋಗ ಸಂಶೋಧನೆ, ಬೆಂಬಲ ಬೆಲೆ, ಅಕ್ರಮ ಆಮದು ತಡೆ, ಗುಣಮಟ್ಟ ಪರಿಶೀಲನೆ ಇತ್ಯಾದಿ ಕ್ಷೇತ್ರದಲ್ಲಿ ಎಆರ್‌ಡಿಎಫ್ ಉತ್ತಮವಾದ ಕೆಲಸ ಮಾಡಿದೆ. ಇನ್ನಷ್ಟು ಕೆಲಸ ಮಾಡಲು ಪ್ರತಿಷ್ಠಾನದಲ್ಲಿ ಹಣದ ಕೊರತೆ ಇದೆ ಎಂದು ಹೇಳಿದರು.
ಅಡಿಕೆ ಹಳದಿ ರೋಗ ಸಂಶೋಧನೆಗೆ ಸಂಬಂಧಿಸಿದಂತೆ ಸರ್ಕಾರ ಬಿಡುಗಡೆ ಮಾಡಿದ 25 ಕೋಟಿ ರೂಪಾಯಿಗೂ ಕ್ಯಾಂಪ್ಕೋ ಸಂಸ್ಥೆಗೂ ಸಂಬಂಧವಿಲ್ಲ. ಅದನ್ನು ತೋಟಗಾರಿಕಾ ಇಲಾಖೆ ಮೂಲಕ ನಿರ್ವಹಿಸಲಾಗುತ್ತದೆ. ಎಲೆ ಚುಕ್ಕಿ ರೋಗದಿಂದ ತುತ್ತಾಗಿರುವ ರೈತರಿಗೆ ಪರಿಹಾರ ಕೊಡುವ ಬಗ್ಗೆ ಕ್ಯಾಂಪ್ಕೋ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಹೇಳಿದರು. ಎಲೆ ಚುಕ್ಕಿ ರೋಗಕ್ಕೆ ಸಂಬಂಧ ಪಟ್ಟಂತೆ ಕಳೆದ ನವೆಂಬರ್ನಲ್ಲಿ ಮಂಗಳೂರಿನಲ್ಲಿ ವಿಜ್ಞಾನಿಗಳನ್ನು ಕರೆಸಿ ವಿಚಾರ ಸಂಕೀರ್ಣ ನಡೆಸಿದ್ದೆವು, ಇದರ ಆಧಾರದ ಮೇಲೆ ಸಂಶೋಧನೆಗೆ ಸೆಂಟ್ರಲ್ ಕಮಿಟಿ ನಿರ್ಮಾಣವಾಗಿದೆ, ಆ ಕಮಿಟಿಯ ಶಿಫಾರಸ್ಸಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ದಿವಂಗತ ಸುಭ್ರಾಯ್ ಭಟ್ಟರು ಮತ್ತು ಸಾಗರದ ಎಲ್ ಟಿ ತಿಮ್ಮಪ್ಪ ಹೆಗಡೆಯವರ ಸಹಕಾರದಿಂದ ಕ್ಯಾಂಪ್ಕೋ ಸಂಸ್ಥೆ ಈ ಹಂತಕ್ಕೆ ಬಂದು ತಲುಪಿದೆ, ಸುವರ್ಣ ಮಹೋತ್ಸವ ಅಂಗವಾಗಿ ಕ್ಯಾಂಪ್ಕೋ ಫ್ಯಾಕ್ಟರಿಯಲ್ಲಿ ತೆಂಗಿನ ಕಾಯಿಗಳಿಂದ ಉತ್ಪಾದನೆಯನ್ನು ತಯಾರಿಸಲು ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಚುನಾವಣೆ ಪ್ರಣಾಳಿಕೆ ಮುನ್ನವೇ ಉಚಿತ ಕೊಡುಗೆಗಳ ಘೋಷಣೆ : ಕಾಂಗ್ರೆಸ್, ಜೆಡಿಎಸ್,ಬಿಜೆಪಿ ಪಕ್ಷಗಳ ನಡುವೆ ಹೆಚ್ಚಿದ ಪೈಪೋಟಿ