ಮಂಗಳೂರು: ಜಿಲ್ಲೆಯ ಪತ್ರಿಯೊಂದು ತಾಲೂಕಿನ ಗ್ರಾಮ ಪಂಚಾಯಿತಿಯ ಡಿಸಿ ಮನ್ನಾ ಜಮೀನಿನ ಬಗ್ಗೆ ಸಂಪೂರ್ಣವಾಗಿ ಸರ್ವೆ ನಡೆಸಿ, ಅದರ ವರದಿಯನ್ನು ಆಯಾ ತಾಲೂಕಿನ ತಹಶೀಲ್ದಾರ್ರು ಕಡ್ಡಾಯವಾಗಿ ಸಲ್ಲಿಸಬೇಕು. ಹೆಚ್ಚುವರಿ ಆಸ್ತಿಗಾಗಿ ಡಿಸಿ ಮನ್ನಾ ಯೋಜನೆ ಅಡಿ ಭೂಮಿಯನ್ನು ಪಡೆಯಲು ಅರ್ಜಿ ಸಲ್ಲಿಸಿರುವವರ ವಿರುದ್ಧ, ಭೂಮಿಯನ್ನು ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆ ಸಮಿತಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನಿನ್ನು ಬಳಕೆ ಮತ್ತು ಖಾಲಿ ಇರುವ ಭೂಮಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ನೀಡಬೇಕು. ಅಧಿಕಾರಿಗಳು ಬಡವರಿಗೆ, ಶೋಷಿತ ವರ್ಗದರಿಗೆ ಡಿ.ಸಿ. ಮನ್ನಾ ಭೂಮಿಯು ಸಮರ್ಪಕವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು. ಇನ್ನು ಇಂತಹ ಪ್ರದೇಶದಲ್ಲಿ ಲೇ ಔಟ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸ್ಥಳೀಯ ಮುಖಂಡರನ್ನು ಕರೆಯಿಸಿ, ಸಭೆಯನ್ನು ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ಹಾಗೆಯೇ ಪೂರ್ವಜರ ಹೆಸರಲ್ಲಿ ಇವರು ಆಸ್ತಿಯನ್ನು ತಮ್ಮ ಮಕ್ಕಳ ಹೆಸರಿನಲ್ಲಿ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಕೆಲವು ತೊಂದರೆಗಳು ಉಂಟಾಗುತ್ತಿದ್ದು, ಅದರ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್ರರು ಗಮನ ಹರಿಸಬೇಕು ಎಂದು ಸೂಚಿಸಿದರು. 2019-20ನೇ ಸಾಲಿನಲ್ಲಿ ಸರ್ಕಾರದಿಂದ ಬಿಡುಗಡೆಯಾದ ಎಸ್ಸಿಎಸ್ಪಿ ಮತ್ತು ಟಿ.ಎಸ್.ಪಿ ಅನುದಾನವನ್ನು ಹಲವು ಇಲಾಖೆಗಳು ಉತ್ತಮವಾಗಿ ಬಳಸಿಕೊಂಡು ಶೇ.87 ರಷ್ಟು ಅಭಿವೃದ್ಧಿ ಹೊಂದಿರುವುದು ಹೆಮ್ಮಯ ಸಂಗತಿ ಎಂದು ತಿಳಿಸಿದರು.
ಜಿಲ್ಲೆಯ ಕೆಲವೊಂದು ಇಲಾಖೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿಲ್ಲ, ಇಂತಹ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು, ಅಭಿವೃದ್ಧಿಯತ್ತ ಗಮನ ನೀಡುವಂತೆ ಅಧಿಕಾರಿಗಳಲ್ಲಿ ಸ್ಫೂರ್ತಿ ನೀಡಬೇಕೆಂದು ಅವರು ಸಲಹೆ ನೀಡಿದರು.
ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನದ ಅಡಿಯಲ್ಲಿ ಅರ್ಜಿ ಸಲ್ಲಿಸುವ ಫಲಾನುಭವಿಗಳ ಆಯ್ಕೆಯು ಸಮರ್ಪಕವಾಗಿ ಕೂಡಿರಬೇಕು. ಅನುದಾನವಿಲ್ಲವೆಂದು ಯಾವುದೇ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ ಹಾಗೂ ಸರ್ಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಅಂತಹ ಫಲಾನುಭವಿಗಳಿಗೆ ಸೌಲಭ್ಯ ನೀಡಬೇಕು ಎಂದು ಹೇಳಿದರು.
ಅವಶ್ಯಕತೆಯಿದ್ದಲ್ಲಿ ಬೇರೆ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಿ, ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ಯೋಜನೆಯನ್ನು ಅನುಷ್ಠಾನ ಮಾಡಬೇಕು. ಜಿಲ್ಲೆಯು ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡಲ್ಲಿ ಇತರೆ ಜಿಲ್ಲೆಯಲ್ಲಿ ಉಳಿದಿರುವ ಅನುದಾನವನ್ನು ನಾವು ಪಡೆಯುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಮಾಹಿತಿ ನೀಡಿದರು.
ಪ್ರತಿಯೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯೂ ಸಭೆಗೆ ಕಡ್ಡಾಯವಾಗಿ ಭಾಗವಹಿಸಬೇಕು, ತಪ್ಪಿದಲ್ಲಿ ಅಂತಹ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಎಲ್ಲಾ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆಯನ್ನು ನೀಡಲಾಗುವುದು. ಮಹಾಕಾಳಿಪಡ್ಪುನಲ್ಲಿ ಸಿದ್ಧವಾಗಿರುವ 32 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಅತಿ ಶೀಘ್ರದಲ್ಲಿ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.
ಮಹಿಳಾ ಪೌರಕಾರ್ಮಿಕರಿಗೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಡ್ರೆಸ್ ರೂಂ ಮತ್ತು ಪ್ರತ್ಯೇಕ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗಿಶ್, ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ ಕುಮಾರ್, ಡಿಸಿಪಿ ವಿನಯ್ ಗಾಂವ್‍ಕರ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.