ಸುಳ್ಯ(ದಕ್ಷಿಣ ಕನ್ನಡ): ಸಮರ್ಪಕ ಸೇತುವೆ ಇಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೂರಾರು ಜನರು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಉಕ್ಕಿ ಬರುತ್ತಿರುವ ಹೊಳೆಯ ನೀರಿನೊಂದಿಗೆ ಸೆಣಸಾಡುವುದರಿಂದ ತಪ್ಪಿಸಿಕೊಂಡಿಲ್ಲ.
ಮಳೆಯಾದರೆ ಸಾಕು ವರ್ಷಪೂರ್ತಿ ಹರಿಯುವ ಹೊಳೆಯ ನೀರಿನಲ್ಲೇ ಬದುಕು ಸಾಗಿಸಬೇಕು. ತಾಲೂಕಿನ ಜನರು ಸಮರ್ಪಕ ಸೇತುವೆ ನಿರ್ಮಾಣಕ್ಕಾಗಿ ಕಾದು ಕುಳಿತಿದ್ದು, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸೇತುವೆ ನಿರ್ಮಾಣ ಕನಸಾಗಿಯೇ ಉಳಿದಿದೆ. ಇದರಿಂದ ಮಳೆಗಾಲದ ದಿನಮಾನಗಳಲ್ಲಿ ಉಕ್ಕಿ ಹರಿಯುವ ಹೊಳೆಯಲ್ಲಿ ತೆರಳಬೇಕಾದ ಪರಿಸ್ಥಿತಿ ತಂದೊಡ್ಡಿಕೊಂಡಿದ್ದಾರೆ. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಮಳೆಗಾಲ ಬಂದರೆ ಸಾಕು ಸುಳ್ಯ ತಾಲೂಕಿನ ಮೊಗ್ರದ ಜನರ ಪಾಡು ಹೇಳತೀರದು. ನಿತ್ಯ ನಮ್ಮ ಜೀವ ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕು. ಮೊಗ್ರದಲ್ಲಿರುವ ಸರ್ಕಾರಿ ಶಾಲೆ ತಲುಪಬೇಕಾದರೆ ಹರಸಾಹಸ ಮಾಡಬೇಕು. ಮಕ್ಕಳು ವಿದ್ಯಾರ್ಜನೆಗಾಗಿ ಧುಮ್ಮಿಕ್ಕಿ ಹರಿಯುವ ಹೊಳೆ ದಾಟಿಕೊಂಡು ಬರಬೇಕು. ಹೊಳೆಗೆ ಸೇತುವೆ ನಿರ್ಮಿಸಿ ಎಂದು ಜನಪ್ರತಿನಿಧಿಗಳಲ್ಲಿ ಹಾಗೂ ಅಧಿಕಾರಿಗಳಿಗೆ ಎಷ್ಟು ಮನವಿ ಸಲ್ಲಿಸಿದರೂ ಇದುವರೆಗೂ ಪ್ರತಿಫಲ ದೊರೆತಿಲ್ಲ. ಮೊಗ್ರ ಸರ್ಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿಗಳಿದ್ದು 50ಕ್ಕೂ ಮಿಕ್ಕಿದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲಿ 30ಕ್ಕಿಂತ ಹೆಚ್ಚು ಮಕ್ಕಳು ಹೊಳೆ ದಾಟಿಯೇ ಶಾಲೆ ಸೇರಬೇಕಾಗಿರುವುದರಿಂದ ಸಮರ್ಪಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಮಳೆಗಾಲದಲ್ಲಿ ಶಾಲೆಗೆ ಹೋಗಲು ಕಷ್ಟವಾಗುವುದರಿಂದ ಮನೆಯಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಇಲ್ಲಿನ ಮಕ್ಕಳದ್ದಾಗಿದೆ. ನಿತ್ಯ ಬೆಳಗ್ಗೆ ಹಾಗೂ ಸಂಜೆ ಮಕ್ಕಳನ್ನು ಮನೆಯಿಂದ ಶಾಲೆಗೆ ಬಿಡುವ ಹಾಗೂ ಕರೆತರುವ ಕೆಲಸವೊಂದೇ ಇಲ್ಲಿನ ಗ್ರಾಮಸ್ಥರದ್ದಾಗಿದೆ. ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಇಲ್ಲಿನ ಬಡ ಕುಟುಂಬಗಳು ಉಪವಾಸದಲ್ಲೇ ಬದುಕು ಸಾಗಿಸಬೇಕಾದ ದಿನಗಳೂ ಸಾಕಷ್ಟು ಕಳೆದಿವೆ. ಮೊಗ್ರ ಹಳ್ಳಿಯಲ್ಲಿ ಬಹುತೇಕ ಬಡ ಕುಟುಂಬಗಳೇ ವಾಸವಾಗಿರುವುದರಿಂದ ಹೆತ್ತವರು ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗಲಾರದೇ, ಆಚೆಗೆ ಕೆಲಸವೂ ಇಲ್ಲ, ಊಟಕ್ಕೆ ದುಡ್ಡೂ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಮಳೆಗಾಲದ ಅವಧಿಯಲ್ಲಿ ಶಾಲೆಗೆ ರಜೆ ನೀಡಲಾಗುತ್ತದೆ. ಅದರಲ್ಲೂ ಈ ಸರ್ಕಾರಿ ಶಾಲೆಗೆ ಹೆಚ್ಚಾಗಿ ದಲಿತ ಕುಟುಂಬದ ಮಕ್ಕಳೇ ಬರುವುದರಿಂದ ಶಿಕ್ಷಣದಿಂದ ಈ ಮಕ್ಕಳು ವಂಚಿತರಾಗುತ್ತಿದ್ದಾರೆ. ಒಂದು ಕಾಲದಲ್ಲಿ 300 ರಷ್ಟು ಮಕ್ಕಳನ್ನು ಹೊಂದಿದ್ದ ಈ ಶಾಲೆ ಇದೀಗ 50ರ ಗಡಿಗೆ ತಲುಪುತ್ತಿರುವುದಕ್ಕೆ ಸೇತುವೆಯ ಕೊರತೆಯೇ ಕಾರಣವಾಗಿದ್ದು, ಶಾಲೆ ಮುಚ್ಚುವ ಹಂತಕ್ಕೂ ತಲುಪಿದೆ. ಹೆಚ್ಚಿನ ಜನ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದು, ಇದೇ ರೀತಿ ಮುಂದುವರಿದಲ್ಲಿ ಶಾಲೆಯನ್ನು ಶಾಶ್ವತವಾಗಿ ಮುಚ್ಚುವ ಸಾಧ್ಯತೆಯೂ ಬರಬಹುದು ಎನ್ನುತ್ತಾರೆ ಇಲ್ಲಿನ ಶಿಕ್ಷಕಿ.
ಒಟ್ಟಾರೆಯಾಗಿ ಖಾಸಗಿ ಶಾಲೆಗಳ ಮಕ್ಕಳ ರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಸರ್ಕಾರ, ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎನ್ನುವ ಆರೋಪಗಳಿಗೆ ಇದು ಮತ್ತಷ್ಟು ಪುಷ್ಟಿ ನೀಡುವಂತಿದೆ. ಸೇತುವೆ ನಿರ್ಮಿಸಿ ಎಂದು ಮಕ್ಕಳು, ಪೋಷಕರು, ಗ್ರಾಮಸ್ಥರು ಅಂಗಲಾಚಿ ಬೇಡಿದರೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮನಕರಗದೇ ಇರುವ ಕಾರಣ ದೇವರೇ ಜನಪ್ರತಿನಿಧಿಗಳಿಗೆ ಜನಸೇವೆ ಮಾಡುವ ಸದ್ಭುದ್ಧಿ ನೀಡಲಿ ಎನ್ನುವುದು ಗ್ರಾಮಸ್ಥರ ಆಶಯವಾಗಿದೆ.
ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಲ್ಲಿ ಬಂದು ಸೇತುವೆ ನಿರ್ಮಿಸುವ ಫೋಸ್ ನೀಡಿದ್ದರಾದರೂ ಈವರೆಗೂ ಸೇತುವೆ ನಿರ್ಮಾಣಗೊಳ್ಳದಿರುವುದು ದುರಂತವೇ ಆಗಿದೆ..!