ಮಂಗಳೂರು: ಇನ್ನು ಮುಂದೆ ಕೇರಳ ಮತ್ತು ಗೋವಾದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರಲು ಕೋವಿಡ್ ಆರ್ಟಿಪಿಸಿಆರ್ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ತಿಳಿಸಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಆದೇಶ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಗೋವಾ ಮತ್ತು ಕೇರಳ ರಾಜ್ಯಗಳಿಂದ ವಿಮಾನ, ರೈಲು, ರಸ್ತೆ ಸಾರಿಗೆ ಮತ್ತು ವೈಯಕ್ತಿಕ ವಾಹನದಲ್ಲಿ ಆಗಮಿಸುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿ ಕಡ್ಡಾಯವಿತ್ತು.
ಈಗ ನೀಡಿರುವ ಆದೇಶದಲ್ಲಿ ಆರ್ಟಿಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿ ಹೊಂದುವುದರಿಂದ ವಿನಾಯಿತಿ ನೀಡಲಾಗಿದೆ. ಆದರೂ ಈ ರಾಜ್ಯಗಳಿಂದ ಬರುವವರು ಮುಂದಿನ ಆದೇಶದವರೆಗೆ ಎರಡು ಡೋಸ್ ಕೋವಿಡ್ ಲಸಿಕೆ ಪ್ರಮಾಣ ತೋರಿಸಬೇಕಾಗಿದೆ ಎಂದು ಆದೇಶಿಸಿದ್ದಾರೆ.
ಇದನ್ನೂ ಓದಿ: ಮಳೆ ಬೆಳೆ ಸಂಪಾಯಿತಲೆ ಪರಾಕ್: ಮೈಲಾರದಲ್ಲಿ ಅದ್ಧೂರಿ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತರು
ಈ ಆದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ. ನಿತ್ಯ ಸಾವಿರಾರು ಮಂದಿ ಶಿಕ್ಷಣ, ವ್ಯವಹಾರ, ಆರೋಗ್ಯ ಕಾರಣಕ್ಕಾಗಿ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುತ್ತಿದ್ದು, ಆರ್ಟಿಪಿಸಿಆರ್ಗೆ ವಿನಾಯಿತಿ ನೀಡಿರುವುದು ಅವರಿಗೆ ಅನುಕೂಲ ತಂದಿದೆ.