ಮಂಗಳೂರು: ಸ್ಮಶಾನವಿಲ್ಲದೇ ಗ್ರಾಮ ಪಂಚಾಯತ್ ಮುಂಭಾಗವೇ ಗ್ರಾಮಸ್ಥರು ಶವಸಂಸ್ಕಾರ ನಡೆಸಲು ಮುಂದಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾದಲ್ಲಿ ನಡೆದಿದೆ. ರುದ್ರಭೂಮಿ ಇಲ್ಲದೇ ಪಂಚಾಯತ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಶಾನಕ್ಕಾಗಿ ಹಲವು ಬಾರಿ ನೆರಿಯಾ ಗ್ರಾಮ ಪಂಚಾಯತ್ಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಇಂದು ನೆರಿಯಾದ ಜನತಾ ಕಾಲೊನಿ ನಿವಾಸಿ ಮೃತಪಟ್ಟ ಹಿನ್ನೆಲೆ ಶವ ಸಂಸ್ಕಾರಕ್ಕೆ ಸ್ಥಳವಿಲ್ಲದೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಅಂತ್ಯಕ್ರಿಯೆ ನಡೆಸದೆ ಗ್ರಾಮ ಪಂಚಾಯತ್ ಮುಂಭಾಗವೇ ಶವವಿರಿಸಿ ಮೃತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿದರು. ಸ್ಮಶಾನಕ್ಕೆ ಸ್ಥಳ ನಿಗದಿ ಮಾಡದೇ ಹೋದರೆ ಪಂಚಾಯತ್ ಎದುರೇ ಅಂತ್ಯಸಂಸ್ಕಾರ ನಡೆಸುವುದಾಗಿ ಎಚ್ಚರಿಕೆ ನೀಡಲಾಯಿತು. ಜನರ ಆಕ್ರೋಶ ಹಿನ್ನೆಲೆ ಪರಿಸ್ಥಿತಿ ಕೈ ಮೀರುವ ಮುನ್ನ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಅವರು ಇಟ್ಟಾಡಿ ಎಂಬಲ್ಲಿ ಸ್ಮಶಾನಕ್ಕಾಗಿ ಮೀಸಲಿಟ್ಟ ಸ್ಥಳದ ಪರಿಶೀಲನೆ ನಡೆಸಿದರು. ಈ ಪರಿಶೀಲನೆ ಸಂದರ್ಭ ನಿಗದಿತ ಸ್ಥಳದಲ್ಲಿ ಸ್ಮಶಾನ ಮಾಡಲು ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು.
ಗೊಂದಲದ ನಡುವೆ ಪಂಚಾಯತ್ ಮುಂದೆ ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಮುಂದಾದರು. ಗ್ರಾಮಸ್ಥರ ಆಕ್ರೋಶ ತೀವ್ರಗೊಂಡ ಹಿನ್ನೆಲೆ ತುರ್ತು ನಿರ್ಧಾರ ಕೈಗೊಂಡ ತಹಶೀಲ್ದಾರ್ ಪಂಚಾಯತ್ ಸಮೀಪದ ಸರಕಾರಿ ಜಾಗವನ್ನು ಸ್ಮಶಾನಕ್ಕಾಗಿ ನಿಗದಿ ಪಡಿಸಲು ಆದೇಶ ಮಾಡಿದ್ದಾರೆ. ಸ್ಮಶಾನಕ್ಕೆ ಸ್ಥಳ ನಿಗದಿಯಾದ ಹಿನ್ನೆಲೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಅತಿವೇಗದ ಚಾಲನೆಯಿಂದ ಅಪಘಾತಕ್ಕೊಳಗಾದ ಕಾರು- ಧರಾಶಾಯಿಯಾದ ಡಿವೈಡರ್ ನಡುವಿನ ವಿದ್ಯುತ್ ಕಂಬ: ಅತಿವೇಗದಿಂದ ಚಲಾಯಿಸಿಕೊಂಡು ಬಂದಿರುವ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪ್ರಪಾತಕ್ಕೆ ಬೀಳುವುದರಿಂದ ಸ್ವಲ್ಪದರಲ್ಲಿ ತಪ್ಪಿದ ಘಟನೆ ಶುಕ್ರವಾರ ತಡರಾತ್ರಿ ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ಬಳಿ ಸಂಭವಿಸಿದೆ.
ಕದ್ರಿಯ ಸರ್ಕ್ಯೂಟ್ ಹೌಸ್ನಿಂದ ಬಿಜೈ ರೋಡ್ ನಡುವಿನ ಬಟ್ಟಗುಡ್ಡೆ ಬಳಿ ಈ ಕಾರು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಸರ್ಕ್ಯೂಟ್ ಹೌಸ್ನಿಂದ ಬಿಜೈ ಕಡೆಗೆ ಈ ಮಾರುತಿ ಬಲೇನೋ ಕಾರು ಅತಿ ವೇಗದಿಂದ ಚಲಾಯಿಸಿಕೊಂಡು ಬಂದಿದೆ. ಆದರೆ ಬಟ್ಟಗುಡ್ಡೆ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್ ಮಧ್ಯೆ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಪ್ರಪಾತದ ಅಂಚಿಗೆ ಸಿಲುಕಿ ನಿಂತಿದೆ.
ಪ್ರಪಾತದ ಸನಿಹದಲ್ಲೇ ಕುರುಚಲು ಪೊದೆಯಿದ್ದಿದ್ದರಿಂದ ಕಾರು ಅದರ ಮಧ್ಯೆ ಸಿಲುಕಿಕೊಂಡಿದೆ. ಇದು ಕಾರು ಪ್ರಪಾತಕ್ಕೆ ಬೀಳುವುದನ್ನು ತಪ್ಪಿಸಿದಂತಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಡಿವೈಡರ್ ಮಧ್ಯೆಯಿರುವ ವಿದ್ಯುತ್ ಕಂಬ ಕಿತ್ತು ಅನತಿ ದೂರದಲ್ಲಿ ಬಿದ್ದಿದೆ. ಆದರೆ ಕಾರಿನೊಳಗಿದ್ದ ಮೂವರೂ ಯಾವುದೇ ಜೀವಾಪಾಯಗಳಿಲ್ಲದೇ ಪಾರಾಗಿದ್ದಾರೆ. ಈ ಬಗ್ಗೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Chikkamagaluru accident: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ.. ಇಬ್ಬರು ಸ್ಥಳದಲ್ಲೇ ಸಾವು