ಮಂಗಳೂರು : ನಗರದ ಪಂಪ್‌ವೆಲ್‌ನಲ್ಲಿ ಹೊಸದಾಗಿ ಬಸ್‌ನಿಲ್ದಾಣ ನಿರ್ಮಾಣ ಮಾಡಲು ಭೂ ಸ್ವಾಧೀನ ಮಾಡಿರುವ ಜಮೀನಿಗೆ ಸಂತ್ರಸ್ತರಿಗೆ ಪರಿಹಾರದ ಹಣ ಪಾವತಿ ಮಾಡದಿರುವುದಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಚರಾಸ್ತಿ ಜಪ್ತಿಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ಆದೇಶ ನೀಡಿದೆ.
ಈ ಸಂಬಂಧ ನ್ಯಾಯಾಲಯದ ಅಮೀನ್ ಅವರು ನ್ಯಾಯಾಲಯದ ಆದೇಶ ಜಾರಿಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಬುಧವಾರ ತೆರಳಿದ್ದು, ಪಾಲಿಕೆಯ ವಿನಂತಿಯ ಮೇರೆಗೆ ಪರಿಹಾರ ಪಾವತಿಗೆ ಅಕ್ಟೋಬರ್ 25ರವರೆಗೆ ಕಾಲಾವಕಾಶ ನೀಡಲಾಗಿದೆ.
ನಗರದ ಪಂಪ್‌ವೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಬಸ್‌ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ಪಾಲಿಕೆಯು 7 ಎಕರೆ 23.5 ಸೆಂಟ್ಸ್ ಜಾಗವನ್ನು 2008ರಲ್ಲಿ ಭೂ ಸ್ವಾಧೀನ ಮಾಡಿತ್ತು. ಒಟ್ಟು 33 ಕುಟುಂಬಗಳು ಈ ಯೋಜನೆಗಾಗಿ ಜಮೀನು ನೀಡಿದ್ದವು. ಸರಕಾರವು ನಿಗದಿಪಡಿಸಿದ ಭೂ ಪರಿಹಾರದ ಮೊತ್ತಕ್ಕೆ 16 ಕುಟುಂಬಗಳು ತಕರಾರುಗಳನ್ನು ತೆಗೆದಿದ್ದವು. ಹೆಚ್ಚಿನ ಪರಿಹಾರವನ್ನು ನೀಡಬೇಕು ಎಂದು ಸಂತ್ರಸ್ತರು ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೆಚ್ಚಿನ ಭೂಪರಿಹಾರಕ್ಕೆ ಸಂಬಂಧಿಸಿ 16 ವ್ಯಾಜ್ಯಗಳ ವಿಚಾರಣೆ ನಡೆಯುತ್ತಿದ್ದು ಈ ಪ್ರಕರಣಗಳಿಗೆ ಪಾಲಿಕೆಯು ತಡೆಯಾಜ್ಞೆ ತಂದಿತ್ತು.
ಆದರೆ, ತಡೆಯಾಜ್ಞೆಯ ಅವಧಿ ಮುಗಿದ ಪ್ರಕರಣವೊಂದರಲ್ಲಿ ನ್ಯಾಯಾಲಯವು ಮಂಗಳೂರು ಮಹಾನಗರ ಪಾಲಿಕೆ ಸ್ವತ್ತುಗಳ ಜಪ್ತಿಗೆ ಆದೇಶ ಮಾಡಿದೆ. ಪ್ರಕರಣದಲ್ಲಿ ಪಾಲಿಕೆಯು ಭೂಮಾಲೀಕರಿಗೆ ರೂ 3.48 ಕೋಟಿ ಪರಿಹಾರ ಪಾವತಿಸಬೇಕಿದೆ.
ಇದನ್ನೂ ಓದಿ : 2,052 ಕಡೆ ರಾಜಕಾಲುವೆ ಒತ್ತುವರಿ ತೆರವು: ಹೈಕೋರ್ಟ್ಗೆ ಬಿಬಿಎಂಪಿ ಮಾಹಿತಿ