ಮಂಗಳೂರು: ನಿಫಾ ವೈರಸ್ ಕೇರಳ ರಾಜ್ಯದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿರುವ ಹಿನ್ನೆಲೆ ಇಂದು ಮಂಗಳೂರಿನಲ್ಲಿ ಗಡಿಭಾಗದಲ್ಲಿರುವ ಕರ್ನಾಟಕದ ನಾಲ್ಕು ಜಿಲ್ಲೆಗಳ ಆರೋಗ್ಯಾಧಿಕಾರಿಗಳೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಆರೋಗ್ಯಾಧಿಕಾರಿಗಳು, ಸರ್ವೇಕ್ಷಣಾ ಅಧಿಕಾರಿಗಳು ಹಾಗೂ ರಾಜ್ಯದ ಆರೋಗ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಹಿನ್ನೆಲೆ ಗಡಿಭಾಗದಲ್ಲಿರುವ ನಾಲ್ಕು ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲಾ ಆರೋಗ್ಯ ಅಧಿಕಾರಿ, ಸರ್ವೇಕ್ಷಣಾ ಅಧಿಕಾರಿ ಮತ್ತು ರಾಜ್ಯದ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗಿದೆ. ಈ ವರೆಗೆ ರಾಜ್ಯದಲ್ಲಿ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಶಂಕಿತ ಪ್ರಕರಣವೂ ಕೂಡ ಪತ್ತೆಯಾಗಿಲ್ಲ. ಆದರೂ ಗಡಿಭಾಗದಲ್ಲಿ ಎಚ್ಚರಿಕೆಯಿಂದ ಇರಲು ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.
ಕೇರಳದ ಗಡಿಭಾಗ ಜಿಲ್ಲೆಯ ಕ್ಲಿನಿಕ್ ಆಸ್ಪತ್ರೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಚೆಕ್ ಪೋಸ್ಟ್ ನಲ್ಲಿ ಕೇರಳದಿಂದ ಬಂದು ಹೋಗಿರುವವರ ಸ್ಕ್ರೀನಿಂಗ್ ಮಾಡಬೇಕು. ಜ್ವರ, ಕೆಮ್ಮು ಇರುವವರ ತಪಾಸಣೆ ಮಾಡಲು ಸೂಚಿಸಲಾಗಿದೆ. ಆರೋಗ್ಯ ಅಧಿಕಾರಿಗಳು ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಚಾಮರಾಜನಗರದ ಹೆಚ್ ಡಿ ಕೋಟೆ ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾದ ಪ್ರದೇಶಕ್ಕೆ ಹತ್ತಿರ ಇದೆ. ಅಲ್ಲಿ ತಾಂಡ, ಹಾಡಿ ಇರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಲು ಜಾಗೃತಿ ಮೂಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಒಂದು ಪ್ರಕರಣ ಕೂಡ ಆಗಬಾರದು. ಈ ರೋಗಕ್ಕೆ ಚಿಕಿತ್ಸೆ ಇಲ್ಲದೆ ಇರುವುದರಿಂದ ಮತ್ತು ಮರಣ ಪ್ರಮಾಣ 40-70% ರಷ್ಟು ಹೆಚ್ಚು ಇರುವುದರಿಂದ ಎಚ್ಚರಿಕೆಯಿಂದ ಇರಬೇಕು. ಈ ರೋಗಕ್ಕೆ ಔಷಧಿ ಇಲ್ಲ, ಲಸಿಕೆ ಇಲ್ಲ. ಆದ ಕಾರಣ ಬಹಳ ಎಚ್ಚರಿಕೆಯಿಂದ ಇರಬೇಕು. ಕೇರಳದಲ್ಲಿ ಕೊನೆಯ ಪ್ರಕರಣ ಸೆ. 15ರಂದು ಪತ್ತೆಯಾಗಿದೆ. ಆದ ಕಾರಣ ಅಕ್ಟೋಬರ್ 7ರ ವರೆಗೆ ತಪಾಸಣೆಯನ್ನು ಮುಂದುವರಿಸಿ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ ಎಂದರು.
ಆ ಬಳಿಕ ಹೊಸ ಪ್ರಕರಣ ಕಾಣಿಸಿಕೊಳ್ಳದಿದ್ದರೆ ಆತಂಕ ಪಡುವ ಅಗತ್ಯ ಇಲ್ಲ. ಕೇರಳ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರಲು ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಂಗಳೂರು ಕೇರಳ ಸಂಪರ್ಕ ಜಾಸ್ತಿ ಇದೆ. ನಿಫಾ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಹೆಚ್ಚು ಕಡಿಮೆ ಆದರೆ ಕ್ವಾರಂಟೈನ್, ಬೆಡ್ ಗುರುತು ಮಾಡಲಾಗಿದೆ. ಮಾಸ್ಕ್, ಕಿಟ್ ರೆಡಿ ಇದೆ. ಈ ಬಗ್ಗೆ ಭಯ ಅಗತ್ಯ ಇಲ್ಲ. ಜನ ಆತಂಕಗೊಳ್ಳಬೇಕಿಲ್ಲ ಎಂದು ಹೇಳಿದರು.
ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇಲ್ಲಿ ವೈರಸ್ ಕಾಣಿಸಲ್ಲ ಎಂಬ ವಿಶ್ವಾಸ ಇದೆ. ಅಂತಹ ಪ್ರಕರಣ ಈವರೆಗೆ ಬಂದಿಲ್ಲ. ನಿಫಾ ವೈರಸ್ ಪತ್ತೆಯಾದ ವಡಕರ್ ಸ್ಥಳದ ಹತ್ತಿರ ಹೋಗಿ ಬಂದವರಿಲ್ಲ. 6 ಜನರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ಕು ಜನ ಗುಣಮುಖರಾಗಿದ್ದಾರೆ. ಮತ್ತೆ ಹೊಸ ಪ್ರಕರಣ ಪತ್ತೆಯಾಗಿಲ್ಲ. ದ.ಕ ಜಿಲ್ಲೆಯಲ್ಲಿ 12, ಮೈಸೂರು 4, ಚಾಮರಾಜನಗರ 2, ಕೊಡಗು 4 ಕಡೆ ಚೆಕ್ ಪೋಸ್ಟ್ ಮಾಡಲಾಗಿದೆ. ದಕ್ಷಿಣ ಕನ್ನಡ 2044, ಕೊಡಗು 1132, ಮೈಸೂರು 6500, ಚಾಮರಾಜನಗರ 600 ಜನರ ಜ್ವರ ತಪಾಸಣೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.