ಮಂಗಳೂರು: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲೆಯ ವಿವಿಧ ತಾಲೂಕುಗಳ ಶಾಲೆಗಳ ಒಟ್ಟು ಒಂಬತ್ತು ವಿದ್ಯಾರ್ಥಿಗಳು 625 ರಲ್ಲಿ 625 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಡಬ ತಾಲೂಕಿನಲ್ಲಿ ಮೂವರು,ಮಂಗಳೂರು ಉತ್ತರದಲ್ಲಿ ಓರ್ವ ವಿದ್ಯಾರ್ಥಿನಿ,ಮಂಗಳೂರು ದಕ್ಷಿಣದಲ್ಲಿ ಓರ್ವ ವಿದ್ಯಾರ್ಥಿನಿ, ಮೂಡಬಿದಿರೆಯಲ್ಲಿ ಒಬ್ಬ ವಿದ್ಯಾರ್ಥಿ, ಬೆಳ್ತಂಗಡಿಯಲ್ಲಿ ಓರ್ವ ವಿದ್ಯಾರ್ಥಿನಿ,ಪುತ್ತೂರಿನಲ್ಲಿ ಓರ್ವ ವಿದ್ಯಾರ್ಥಿನಿ, ಬಂಟ್ವಾಳದಲ್ಲಿ ಒಬ್ಬ ವಿದ್ಯಾರ್ಥಿ ಟಾಪರ್ ಆಗಿದ್ದಾರೆ.
ರಾಜ್ಯದ ಒಟ್ಟು 157 ವಿದ್ಯಾರ್ಥಿಗಳಿಗೆ 625 ಅಂಕ:
ಕಡಬ ತಾಲೂಕಿನ, ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಯರಾದ ಅನನ್ಯ ಹಾಗೂ ವೆನೆಸಾ ಶರಿನಾ ಡಿಸೋಜಾ ,ಹಾಗೂ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಶ್ರೀಶ ಶರ್ಮ, ಮೂಡಬಿದಿರೆ ಆಳ್ವಾಸ್ ಕನ್ನಡ ಶಾಲೆಯ ಗಣೇಶ್,ಮಂಗಳೂರಿನ ಕೆನರಾ ಪ್ರೌಢ ಶಾಲೆಯ ಕು.ಕೀರ್ತನಾ, ಹಾಗೂ ಸಂತ ಜೆರೂಸಾ ಪ್ರೌಢ ಶಾಲೆಯ ಕು.ರಿತಿಕಾ, ಬೆಳ್ತಂಗಡಿ ಸಂತ ಮೇರಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಂಯುಕ್ತಾ ಪ್ರಭು, ಬಂಟ್ವಾಳದ ಎಸ್.ವಿ.ಎಸ್ ಟೆಂಪಲ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರತೀಕ್ ಮಲ್ಯ, ಪುತ್ತೂರಿನ ಬೆಥನಿ ಇಂಗ್ಲೀಷ್ ಮೀಡಿಯಂ ಶಾಲೆಯ ಕು.ತನೀಶಾ ರೈ, ಎಂಬವರು 625ರಲ್ಲಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜ್ಯದಲ್ಲಿ ಒಟ್ಟು 157 ವಿದ್ಯಾರ್ಥಿಗಳು 625 ಅಂಕ ಪಡೆದಿದ್ದಾರೆ.
'C' ಗ್ರೇಡ್ ಪಡೆದಿರುವ ಶೇ.9ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ:
ಈ ಬಾರಿ ಒಟ್ಟು 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 99.9 ಉತ್ತೀರ್ಣ ಫಲಿತಾಂಶ ದಾಖಲಾಗಿದೆ. 4,70,160 ವಿದ್ಯಾರ್ಥಿಗಳು, 4,01,280 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. 1,28,931 ವಿದ್ಯಾರ್ಥಿಗಳು A+, 2,50,317 ವಿದ್ಯಾರ್ಥಿಗಳು A, 2,87,694 ವಿದ್ಯಾರ್ಥಿಗಳು B, 1,13,610 ವಿದ್ಯಾರ್ಥಿಗಳು C ಗ್ರೇಡ್ ಪಡೆದುಕೊಂಡಿದ್ದಾರೆ. ಶೇ. 9ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಿ ಪಾಸ್ ಮಾಡಲಾಗಿದೆ. C ಗ್ರೇಡ್ ಪಡೆದಿರುವ ಶೇ.9ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಲಾಗಿದೆ.
157 ವಿದ್ಯಾರ್ಥಿಗಳು 625ಕ್ಕೆ 625 ಅಂಕ, 289 ವಿದ್ಯಾರ್ಥಿಗಳು 625ಕ್ಕೆ 623 ಅಂಕ, ಇಬ್ಬರು 625ಕ್ಕೆ 622 ಅಂಕ, 449 ವಿದ್ಯಾರ್ಥಿಗಳು 625ಕ್ಕೆ 621 ಅಂಕ ಪಡೆದುಕೊಂಡಿದ್ದಾರೆ.
ಉದ್ಯಮಿಯಾಗುವ ಹೆಬ್ಬಯಕೆ:
ಸಾಮಾನ್ಯವಾಗಿ SSLC ಯಲ್ಲಿ ಔಟ್ ಆಫ್ ಔಟ್ ಅಂಕ ಗಳಿಸಿದ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್, ಚಾರ್ಟರ್ಡ್ ಅಕೌಂಟೆಂಟ್ಗಳಾಗ ಬಯಸಿದರೆ, ಬಂಟ್ವಾಳದ ಪ್ರತೀಕ್ ಉದ್ಯಮಿಯಾಗುವೆ ಎನ್ನುತ್ತಿದ್ದಾನೆ.
ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯಗೆ 625ಕ್ಕೆ 625 ಅಂಕಗಳು ಲಭಿಸಿವೆ. ಪ್ರತೀಕ್ ಬಂಟ್ವಾಳ ತ್ಯಾಗರಾಜ ರಸ್ತೆ ನಿವಾಸಿ ಎನ್. ವೆಂಕಟೇಶ್ ಮಲ್ಯ ಹಾಗೂ ರಾಧಿಕಾ ಮಲ್ಯ ಅವರ ಪುತ್ರ. ಈತ ಮುಂದೆ ಕಾಮರ್ಸ್ ನಲ್ಲಿ ಕಲಿಕೆ ಮುಂದುವರಿಸಿ, ಉದ್ಯಮಿಯಾಗುವ ಗುರಿ ಹೊಂದಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪ್ರತೀಕ್ ಸಾಧನೆಯನ್ನು ಅಭಿನಂದಿಸಿದ್ದಾರೆ.