ಬಂಟ್ವಾಳ (ದಕ್ಷಿಣ ಕನ್ನಡ): ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎನ್ಐಎ, ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್ ವಶಕ್ಕೆ ಪಡೆದುಕೊಂಡಿದೆ. ತನಿಖಾ ಸಂಸ್ಥೆಗೆ ಲಭ್ಯವಾದ ಸಾಕ್ಷಿಗಳ ಆಧಾರದಲ್ಲಿ ಈ ಪರಿಸರದಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆಸಲಾಗುತ್ತಿದ್ದ ಶಂಕೆಯಲ್ಲಿ ಸಮುದಾಯ ಭವನವನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಬೆಂಗಳೂರು ವಿಭಾಗದ ಎನ್ಐಎ ಮುಖ್ಯ ತನಿಖಾಧಿಕಾರಿ ಷಣ್ಮುಗಂ ಎಂ. ಅವರು ಫ್ರೀಡಂ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅಬೂಬಕರ್ ಸಿದ್ಧೀಕ್ ಅವರಿಗೆ ನೋಟಿಸ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. 1967ರ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಕಲಂ 25ರನ್ವಯ ಇಲ್ಲಿ ಪಿಎಫ್ಐ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆ ಎಂದು ಆರೋಪಿಸಿ ಕೃತ್ಯಕ್ಕೆ ಬಳಸಿದ ಹಾಲ್ ಸಹಿತ ಜಾಗವನ್ನು ಎನ್ಐಎ ಸ್ವಾಧೀನಪಡಿಸಿಕೊಂಡಿದೆ. ಇನ್ನು ಜಮೀನನ್ನು ಬೇರೆಯವರಿಗೆ ಮಾರಾಟ ಮಾಡುವ, ವರ್ಗಾವಣೆ ಮಾಡುವ, ಲೀಸ್ ಗೆ ಕೊಡುವ ಮತ್ತು ಇನ್ಯಾವುದೇ ರೀತಿಯಲ್ಲಿ ಬದಲಾವಣೆ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಸಂದರ್ಭ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಫ್ರೀಡಂ ಕಮ್ಯೂನಿಟಿ ಹಾಲ್‌ನ 20 ಗುಂಟೆ ಜಾಗದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಶಸ್ತ್ರಾಸ್ತ್ರ ತರಬೇತಿ ಹಾಗೂ ಭಯೋತ್ಪಾದನಾ ಚಟುವಟಿಕೆ ನಡೆಸಲು ಬಳಸಲಾಗುತ್ತಿತ್ತು ಎಂದು ಎನ್.ಐ.ಎ. ತನಿಖೆಯಲ್ಲಿ ತಿಳಿದುಬಂದಿತ್ತು.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ 14 ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ಇನ್ನು ತಲೆಮರೆಸಿಕೊಂಡಿರುವ ಆರು ಮಂದಿಗಾಗಿ ಶೋಧಕಾರ್ಯ ಮುಂದುವರೆಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ 240 ಸಾಕ್ಷಿಗಳ ಹೇಳಿಕೆ ಸೇರಿದಂತೆ 1,500 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಪ್ರವೀಣ್ ಹತ್ಯೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಿತ್ತು. ಫೆಬ್ರವರಿ 10ರಂದು ಪುತ್ತೂರಿನಲ್ಲಿ ನಡೆದಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜಿದ್ ಕೊಡ್ಲಿಪೇಟೆ ಅವರು ಶಾಫಿ ಬೆಳ್ಳಾರೆಯನ್ನು ಪುತ್ತೂರು ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿಸುವುದಾಗಿ ಹೇಳಿದ್ದರು.
ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಶಾಫಿ ಬೆಳ್ಳಾರೆಗೆ ಟಿಕೆಟ್ ನೀಡುವುದಾಗಿ ಘೋಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ಬಗ್ಗೆ ಈ ಬೆಳವಣಿಗೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಶಾಫಿ ಬೆಳ್ಳಾರೆ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು, ಸದ್ಯ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ಪುತ್ತೂರು ಕ್ಷೇತ್ರಕ್ಕೆ ಶಾಫಿ ಬೆಳ್ಳಾರೆಗೆ ಟಿಕೆಟ್ ಘೋಷಿಸಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ