ಮಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆ ಸಂಬಂಧ ಕೆಲವು ನಿಯಮಗಳನ್ನು ರೂಪಿಸಲಾಗಿದೆ. ಸಮುದ್ರ ತೀರ ಸೇರಿದಂತೆ ಹೊರಾಂಗಣದಲ್ಲಿ ನಡೆಯುವ ಸಂಭ್ರಮಾಚರಣೆಗೆ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ ಇದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.
ವರ್ಷಾಂತ್ಯದ ಆಚರಣೆ ಹಿನ್ನೆಲೆಯಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೀಚ್‌ನಲ್ಲಿ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ ಇರಲಿದೆ. ನೈತಿಕ ಪೊಲೀಸ್ಗಿರಿ ಸೇರಿದಂತೆ ಅಹಿತಕರ ಘಟನೆಗಳು ಕಂಡುಬಂದರೆ, ಪೊಲೀಸ್ ಸಂಪರ್ಕ ಸಂಖ್ಯೆಗಳನ್ನು ಬಳಸಿಕೊಳ್ಳಬೇಕು. ಹೊರಾಂಗಣ ಪಾರ್ಟಿ ನಡೆಯುವ ಸ್ಥಳ, ಅತಿ ಹೆಚ್ಚು ಜನಸಂದಣಿ ಸೇರುವ ಜಾಗಗಳಲ್ಲಿ ಪೊಲೀಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನೊಳಗೊಂಡ ಫ್ಲೆಕ್ಸ್ ಹಾಕಲಾಗುವುದು. 112ಕ್ಕೆ ಕರೆ ಮಾಡಿಯೂ ತಿಳಿಸಬಹುದು ಎಂದರು.
ಬೀಚ್‌ಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ನಿಗಾ ಮತ್ತು ಬೆಳಕಿನ ವ್ಯವಸ್ಥೆ ಸೇರಿದಂತೆ ಇತರ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿ 36 ಕಡೆ ಒಳಾಂಗಣ ಹಾಗೂ ಬೀಚ್ ಸೇರಿದಂತೆ ಕೆಲವು ಹೊರಾಂಗಣದಲ್ಲೂ ಆಚರಣೆಗೆ ಅನುಮತಿ ಕೇಳಿದ್ದಾರೆ. ಆದರೆ ಒಳಾಂಗಣದಲ್ಲಿ ರಾತ್ರಿ 12.30ವರೆಗೆ ಹಾಗೂ ಹೊರಾಂಗಣದಲ್ಲಿ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಹೊಸ ವರ್ಷಾಚರಣೆ; ಎಂಜಿ ರೋಡ್, ಬ್ರಿಗೇಡ್ ರೋಡ್ಗೆ ಆಗಮಿಸುವವರಿಗೆ ಪೊಲೀಸರ ಸೂಚನೆ
ಮಂಗಳೂರು ನಗರದಲ್ಲಿ ನೈತಿಕ ಪೊಲೀಸ್ಗಿರಿ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ನೈತಿಕ ಪೊಲೀಸ್ಗಿರಿ ನಡೆದ ಸಂದರ್ಭದಲ್ಲಿ ಸಾರ್ವಜನಿಕರು ಅಧಿಕಾರಿಗಳ ಸಂಖ್ಯೆಗೆ ನೇರವಾಗಿ ಕರೆ ಮಾಡುವಂತೆ ಕಮಿಷನರ್ ಮನವಿ ಮಾಡಿದ್ದಾರೆ.
ಸೂಕ್ಷ್ಮ ಪ್ರದೇಶದಲ್ಲಿ 66 ಪೊಲೀಸ್ ತಂಡಗಳನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ 850 ಪೊಲೀಸ್ ಸಿಬ್ಬಂದಿ, 8 ಸಿಎಆರ್ ತಂಡ, 3 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗುತ್ತದೆ. 106 ಪ್ರದೇಶದಲ್ಲಿ ನಾಕಾಬಂಧಿ ಮಾಡಲಿದ್ದೇವೆ. ಡ್ರಗ್ಸ್ ಪಾರ್ಟಿ ಬಗ್ಗೆಯೂ ಕ್ರಮ ಕೈಗೊಂಡಿದ್ದೇವೆ. ರಾಜ್ಯದ ನಿಯಮಾವಳಿ ಜೊತೆಗೆ, ನಮ್ಮ ನಿಯಮಗಳನ್ನೂ ಪಾಲನೆ ಮಾಡಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ವಿವರ ಒದಗಿಸಿದರು.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಬೆಂಗಳೂರಿಗರ ನೆಚ್ಚಿನ ಹಾಟ್ಸ್ಪಾಟ್ಗಳಿವು