ಬಂಟ್ವಾಳ: ಶನಿವಾರ ಬೆಳಗ್ಗೆ ಮಳೆ ಕಡಿಮೆ ಇದ್ದರೂ ಘಟ್ಟ ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 9.2 ಮೀಟರ್ ಎತ್ತರಕ್ಕೆ ಹರಿಯುತ್ತಿದ್ದು, ಇದರಿಂದ ತಗ್ಗು ಪ್ರದೇಶ, ರಸ್ತೆ, ಸಮೀಪದ ಮನೆಗಳಿಗೆ ನೀರು ನುಗ್ಗಿದೆ.
ಶನಿವಾರ ಬೆಳಗ್ಗೆ ನದಿ ಅಪಾಯದ ಮಟ್ಟವಾದ 8.5 ಮೀಟರ್ ಎತ್ತರವನ್ನೂ ದಾಟಿ ಹರಿಯಲಾರಂಭಿಸಿದ್ದು, ಬೆಳಗ್ಗೆ 7 ಗಂಟೆ ವೇಳೆಗೆ 9 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು. ಇದರಿಂದ ತಗ್ಗು ಪ್ರದೇಶಗಳಾದ ಗೂಡಿನಬಳಿ, ಬಂಟ್ವಾಳ ರಸ್ತೆ, ಬಡ್ಡಕಟ್ಟೆ ಮೀನು ಮಾರ್ಕೆಟ್ ಸಮೀಪ ನೀರು ಉಕ್ಕಿ ಹರಿಯಲಾರಂಭಿಸಿದೆ. ಇನ್ನು ಪಾಣೆ ಮಂಗಳೂರು ಸಮೀಪವೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಲ್ಲದೇ ಆಲಡ್ಕದ ಕೆಲ ಮನೆಗಳ ಸಮೀಪ ನೀರು ಬಂದಿದೆ. ಕಳೆದ ವರ್ಷ ಅಪಾಯವಾದ ಜಾಗಗಳ ನಿವಾಸಿಗಳು ಎಚ್ಚರದಲ್ಲಿರಲು ತಾಲೂಕು ಆಡಳಿತ ಸೂಚಿಸಿದ್ದು, ತೀರ ಪ್ರದೇಶದವರು ಸುರಕ್ಷಿತ ಜಾಗಗಳಿಗೆ ತೆರಳುತ್ತಿದ್ದಾರೆ.
ಇನ್ನು ಶಂಭೂರು ಡ್ಯಾಂ ಮೊದಲೇ ಭರ್ತಿಯಾಗಿದ್ದು,14 ಗೇಟುಗಳನ್ನು ಶೇ.50ರಷ್ಟು ತೆರೆಯಲಾಗಿದೆ. ಆಗಾಗ ಸೈರನ್ ಮೊಳಗಿಸುವ ಮೂಲಕ ನೀರನ್ನು ಹರಿಬಿಡಲಾಗುತ್ತಿದೆ.