ಮಂಗಳೂರು: ನಾರದರು ಎಲ್ಲಿ ಹೋದರೂ ಸಮಸ್ಯೆ ಉದ್ಭವವಾಗುತ್ತದೆ. ಈಗಿನ ಮಾಧ್ಯಮಗಳು ತಳೆದಿರುವ ಅವತಾರವೂ ಬಹಳಷ್ಟು ಪ್ರಮಾಣದಲ್ಲಿ ಹಾಗೆಯೇ ಇದೆ. ಇಂದು ಕೋಟ್ಯಂತರ ನಾರದರು ಉದ್ಭವವಾದರೆ ಏನಾಗಬಹುದೋ ಅದೇ ರೀತಿ ಇಂದಿನ ಮಾಧ್ಯಮಗಳು ವಿಶ್ವರೂಪ ತಳೆದಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದು ಪತ್ರಿಕೆ, ದೃಶ್ಯ ಮಾಧ್ಯಮ,ಸಾಮಾಜಿಕ ಜಾಲತಾಣಗಳಂತಹ ಮಾಧ್ಯಮಗಳ ಅಬ್ಬರದ ನಡುವೆ ಬಹಳ ಜಾಗರೂಕತೆಯಿಂದ ವರ್ತಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಪ್ರತಿಯೊಬ್ಬರಿಗೂ ಬದಲಾಗುವ ಈ ಕಾಲಘಟ್ಟದಲ್ಲಿ ವಿವಿಧ ಕಾರ್ಯಾಗಾರಗಳ ಮುಖಾಂತರ ಮೇಲ್ದರ್ಜೆಗೇರುತ್ತಾ ಈ ಕಾಲದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಇಂದು ಮಾಧ್ಯಮಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಗೂ ಸವಾಲುಗಳು ಎದುರಾಗುತ್ತಲೇ ಇರುತ್ತವೆ ಎಂದು ಮೋಹನ್ ಆಳ್ವ ಹೇಳಿದರು.
ಇನ್ನು, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ ವಿ ಮಲ್ಲಿಕಾರ್ಜುನಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರಜಾಪ್ರಭುತ್ವದ ಪ್ರಮುಖ ಶಕ್ತಿಯಾಗಿರುವ ಪತ್ರಿಕೆಗಳು ಸತ್ಯ, ನಿಷ್ಠೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕಾಗಿದೆ ಎಂದರು.