ಪುತ್ತೂರು: ಪುರುಷರು ಹಾಗೂ ಮಹಿಳೆಯರಿಗಾಗಿ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಮಾ. 20 ರಿಂದ 22ವರೆಗೆ ತೆಂಕಿಲ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗುವುದು ಎಂದು ವಾಲಿಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಸತೀಶ್ ಬಿ.ಎಸ್. ತಿಳಿಸಿದರು.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಹಾಗೂ ಸೆವೆನ್ ಡೈಮಂಡ್ಸ್ ಯೂತ್ ಕ್ಲಬ್ ಜಂಟಿ ಆಶ್ರಯದಲ್ಲಿ ಈ ಪಂದ್ಯವನ್ನು ಹಮ್ಮಿಕೊಳ್ಳಲಾಗಿದೆ. ವಾಲಿಬಾಲ್ನಂತಹ ಕ್ರೀಡೆ ಬೆಳೆಯಬೇಕೆಂಬ ನಿಟ್ಟಿನಲ್ಲಿ ಅಸೋಸಿಯೇಷನ್ ಕೋಚಿಂಗ್ ಕ್ಯಾಂಪ್‌ಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದು, ಇಲ್ಲಿ ತರಬೇತಿ ಪಡೆಯುತ್ತಿರುವ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಲೀಗ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು, ಭಾರತದ ಪ್ರಮುಖ ಅಂತಾರಾಷ್ಟ್ರೀಯ ಮಟ್ಟದ ಹಿರಿಯ ಹಾಗೂ ಕಿರಿಯ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಪಂದ್ಯಾಟದ ವೀಕ್ಷಣೆಗಾಗಿ ಗ್ಯಾಲರಿಗಳನ್ನು ನಿರ್ಮಿಸಲಾಗುವುದು. ಒಟ್ಟು 30 ಲಕ್ಷ ರೂ. ವೆಚ್ಚ ಬೇಕಾಗುತ್ತದೆ. ಪುರುಷರ ವಿಭಾಗದಿಂದ ಒಟ್ಟು ಆರು ತಂಡಗಳು, ಮಹಿಳೆಯರ ತಂಡದಿಂದ ಒಟ್ಟು ಮೂರು ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಂದ್ಯಾಟ ಸಮಿತಿ ಅಧ್ಯಕ್ಷ ಬೇಬಿ ಜಾನ್, ಖಜಾಂಚಿ ಪ್ರದೀಪ್ ಪಿ.ಆರ್., ವಾಲಿಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ಮೋನಪ್ಪ ಎಮ್., ಸದಸ್ಯ ಸಂಜೀವ ಉಪಸ್ಥಿತರಿದ್ದರು.