ಬೆಳ್ತಂಗಡಿ: ತಾಲೂಕಿನ ನಡ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ, ಶಾಲೆಯ ಗಣಿತ ಪ್ರಯೋಗಾಲಯದ ರೂವಾರಿ ಶಿಕ್ಷಕ ಯಾಕೂಬ್ ಇವರು ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
![national award nada government school teacher](https://etvbharatimages.akamaized.net/etvbharat/prod-images/kn-mng-belthangady-03-nationalaward-photo-kac10018_21082020222758_2108f_1598029078_2.jpg)
ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವಾಲಯವು ಈ ಸಾಲಿನ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕ ರಾಜ್ಯದ ಇಬ್ಬರು ಶಿಕ್ಷಕರಲ್ಲಿ ಯಾಕೂಬ್ ಅವರು ಪುರಸ್ಕ್ರತರಾಗಿರುವುದು ಬೆಳ್ತಂಗಡಿ ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ.
ಈ ಬಗ್ಗೆ ಈ ಟಿವಿ ಭಾರತ್ನೊಂದಿಗೆ ಮಾತನಾಡಿದ ಶಿಕ್ಷಕ ಯಾಕೂಬ್, ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು ತುಂಬಾ ಸಂತೋಷವಾಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಜನ ಗುರುತಿಸುತ್ತಾರೆ ತಕ್ಕ ಪ್ರತಿಫಲ ದೇವರು ಕೊಡುತ್ತಾನೆ ಎಂಬುದಕ್ಕೆ ನಾನೇ ಉದಾಹರಣೆ. ಯಾರು ಏನು ಬೇಕಾದರೂ ಟೀಕೆ ಮಾಡಲಿ, ಇನ್ನೇನಾದರೂ ಮಾಡಲಿ ಅದಕ್ಕೆ ತಲೆಕೆಡಿಸಿಕೊಳ್ಳದೆ ನಮ್ಮ ದಾರಿಯಲ್ಲಿ ನಾವು ಸರಿಯಾಗಿ ಹೆಜ್ಜೆ ಇಟ್ಟು ಮುಂದುವರಿದರೆ ಪ್ರತಿಫಲ ಖಂಡಿತ ಸಿಗುತ್ತದೆ. ಸರಕಾರ ನಮಗೆ ಸಂಬಳ ಕೊಡೋದು ಮಕ್ಕಳಿಗೆ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ನೀಡಿ ಸಮಾಜದಲ್ಲಿ ಅವರನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ. ಅದರಲ್ಲಿ ನಾನು ಸ್ವಲ್ಪ ಯಶಸ್ಸು ಗಳಿಸಿದ್ದೇನೆ. ತಂದೆ ತಾಯಿಯ ಆಶೀರ್ವಾದ ಹಾಗೂ ನನ್ನ ಎಲ್ಲಾ ಮಕ್ಕಳ ಹಾರೈಕೆಯ ಫಲದಿಂದ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಇದೇ ಸೆ.5 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.