ಮಂಗಳೂರು: ಕಾಶ್ಮೀರದಲ್ಲಿ 370 ವಿಧಿಯನ್ನು ಜಾರಿಗೆ ತಂದಾಗ ಮೂರು ಕುಟುಂಬಗಳು ಸಂತೋಷಗೊಂಡವು. ಆದರೆ ಮೊನ್ನೆ ಆ ವಿಧಿಯನ್ನು ರದ್ದು ಮಾಡಿದಾಗ ಮೂರು ಕುಟುಂಬ ಕಣ್ಣೀರಿಟ್ಟವು. ದೇಶದ 120 ಕೋಟಿ ಜನರು ಸಂಭ್ರಮಪಟ್ಟರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ನಗರದ ರಮಣ ಪೈ ಸಭಾಂಗಣದಲ್ಲಿ ನಡೆದ ಜನಜಾಗರಣ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಳಿಕ ಬ್ರಿಟಿಷರ ಷಡ್ಯಂತ್ರದಿಂದ ಭಾರತ-ಪಾಕಿಸ್ತಾನ ಇಬ್ಭಾಗವಾದವು. ಆಗಿನ ಪ್ರಧಾನಿ ಜವಾಹರಲಾಲ್ ನೆಹರೂರವರ ಚಿಂತನೆಯಿಂದ ಶೇಖ್ ಅಬ್ದುಲ್ಲಾರ ಪ್ರಭಾವದಿಂದ ಕಾಶ್ಮೀರಕ್ಕೆ 370ನೇ ವಿಧಿ ವಿಶೇಷ ಸ್ಥಾನಮಾನ ನೀಡಿತು. ನಿಜವಾಗಿಯೂ ಪಂಡಿತರ, ಜ್ಞಾನವಂತರ ನಾಡಾಗಿದ್ದ ಕಾಶ್ಮೀರ ಬಳಿಕ ಭಯೋತ್ಪಾದಕರ ನಾಡಾಗಿ ಪರಿವರ್ತನೆ ಆಯಿತು ಎಂದು ಹೇಳಿದರು.
ಶ್ಯಾಮ್ ಪ್ರಸಾದ್ ಅವರು ಒಂದು ದೇಶದಲ್ಲಿ ಒಬ್ಬರೇ ಪ್ರಧಾನಿ, ಒಂದೇ ಧ್ವಜ, ಒಂದೇ ಸಂವಿಧಾನ ಇರಬೇಕು ಎಂಬ ಕಾರಣಕ್ಕೆ ಜನಸಂಘವನ್ನು ಆರಂಭ ಮಾಡಿದರು. ಅದಕ್ಕಾಗಿ ಕಾಶ್ಮೀರದವರೆಗೆ ಯಾತ್ರೆಯನ್ನೂ ಮಾಡಿದರು. ಅವರ ಬಲಿದಾನವೂ ನಡೆಯಿತು. ಅಂದಿನಿಂದ ಇಂದಿನವರೆಗಿನ 68 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ನಿಜವಾಗಿ ಈಗ ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರಕಿದಂತಾಗಿದೆ ಎಂದು ಹೇಳಿದರು.
ಈ ದೇಶದಲ್ಲಿ ಎಲ್ಲಾ ಕಡೆಗಳಲ್ಲಿ ಐದು ವರ್ಷಗಳಿಗೊಮ್ಮೆ ಸರ್ಕಾರ ರಚನೆ ಆದರೆ, ಕಾಶ್ಮೀರದಲ್ಲಿ ಆರು ವರ್ಷಕ್ಕೊಮ್ಮೆ ಸರ್ಕಾರ ರಚನೆ ಆಗುತ್ತದೆ. ಇಲ್ಲಿಯವರೆಗೆ ಅಲ್ಲಿ ಎಸ್ಸಿ, ಎಸ್ಟಿ ಕಾಯ್ದೆಗಳಿರಲಿಲ್ಲ. ಒಬಿಸಿ ಕಾಯ್ದೆಗಳಿರಲಿಲ್ಲ. ಆದರೆ ಇಂದು ಅಖಂಡ ಭಾರತದ ಕಲ್ಪನೆ 370 ವಿಧಿ ರದ್ಧತಿ ಮೂಲಕ ಸಾಕಾರಗೊಂಡಿದೆ ಎಂದಿದ್ದಾರೆ.