ಮಂಗಳೂರು: ಸಿಎಂ ಬದಲಾವಣೆ ಬಗ್ಗೆ ಚರ್ಚೆಯೇ ನಮ್ಮಲಿಲ್ಲ. ಯಾವುದೇ ರೀತಿಯ ಗೊಂದಲ, ಅಪಸ್ವರ ವ್ಯತ್ಯಾಸಗಳಿಲ್ಲ. ನಮ್ಮ ಸರ್ವಸಮ್ಮತಿಯ ನಾಯಕ ಯಡಿಯೂರಪ್ಪನವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಪಕ್ಷದ ರಾಷ್ಟ್ರನಾಯಕರು ಹೇಳಿದರೆ, ಹೈಕಮಾಂಡ್ ಸೂಚನೆ ನೀಡಿದರೆ ಅದಕ್ಕೆ ಸರಿಯಾಗಿ ನಡೆದುಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇದು ಬಿಜೆಪಿಯ ವಿಶೇಷತೆ. ಬಿಜೆಪಿಗರು ಅಧಿಕಾರಕ್ಕೆ ಅಂಟಿ ಕುಳಿತವರಲ್ಲ. ಇದು ಆದರ್ಶ ಎಂದು ತಿಳಿಸಿದರು.
ಆದರೆ ಪಕ್ಷದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಗಳಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಯಡಿಯೂರಪ್ಪನವರು ನಮ್ಮ ಸರ್ವ ಸಮ್ಮತಿಯ ನಾಯಕರು. ಪಕ್ಷದಲ್ಲಿ, ರಾಷ್ಟ್ರನಾಯಕರಲ್ಲಿ ಈ ಬಗ್ಗೆ ಚರ್ಚೆಗಳಿಲ್ಲ. ಹಾಗಾಗಿ ಈ ಬಗ್ಗೆ ಚರ್ಚೆಗಳು ಅಪ್ರಸ್ತುತ. ಸಿಎಂ ಯಡಿಯೂರಪ್ಪನವರು ಚೆನ್ನಾಗಿ ಕೋವಿಡ್ ನಿರ್ವಹಣೆ ಮಾಡುತ್ತಿದ್ದಾರೆ. ಇನ್ನಷ್ಟು ಮಾಡಬೇಕಾಗಿದ್ದು, ಆ ಕಾರ್ಯದ ಕಡೆಗೆ ಗಮನ ಹರಿಸುತ್ತಿದ್ದಾರೆ ಎಂದರು.
ಚುನಾವಣೆ ಆದ ಬಳಿಕ ವಿರೋಧ ಪಕ್ಷಗಳ ಟೀಕೆಗಳು, ಅಪವಾದ, ಬೇರೆ ಬೇರೆ ಕಾರಣಗಳನ್ನಿಟ್ಟುಕೊಂಡು ಮಾಡುತ್ತಿರುವ ರಾಜಕೀಯ ಮಾಡುತ್ತಿರುವ ತಂತ್ರಗಾರಿಕೆ ಬಗ್ಗೆ ಅವರಿಗೆ ಸಹಜವಾದ ನೋವು ಇರಬಹುದು. ಆದರೆ ಸಿಎಂ ತಾನೊಬ್ಬ ಬಿಜೆಪಿ ಕಾರ್ಯಕರ್ತ. ಕಾರ್ಯಕರ್ತನೋರ್ವ ಹೈಕಮಾಂಡ್ ಹೇಳಿದ್ದನ್ನು ಕೇಳಬೇಕು ಎಂಬ ಸ್ಪಷ್ಟವಾದ ಸಂದೇಶವನ್ನು ನೀಡಿದ್ದಾರೆ. ಆದರೆ ಪಕ್ಷದ ಮುಂದೆ ಸಿಎಂ ಬದಲಾವಣೆ ಬಗ್ಗೆ ಯಾವುದೇ ಗೊಂದಲ, ಚರ್ಚೆಗಳಿಲ್ಲ. ಪಕ್ಷದೊಳಗೆ ಯಾರಿಗೂ ಈಗ ಭಿನ್ನಾಭಿಪ್ರಾಯಗಳಿಲ್ಲ. ಹಾಗೇನಾದರೂ ಯಾರಿಗಾದರೂ ನೋವುಗಳಿದ್ದಲ್ಲಿ ನಮ್ಮಲ್ಲಿ ಬಂದು ಮಾತನಾಡಬಹುದು ಎಂದು ಸ್ಪಷ್ಟಪಡಿಸಿದರು.