ಮಂಗಳೂರು: ಕಾಂಗ್ರೆಸ್ನಲ್ಲಿ ಸದ್ಯ ಸಿದ್ದರಾಮಯ್ಯನವರದ್ದು ನಾಯಿ ಪಾಡಾಗಿದೆ. ವಲಸೆ ಬಂದವರು ಎಂಬ ಕಾರಣಕ್ಕೆ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದರೆ ಬಿಜೆಪಿ ಸೇರಿದ ಶಾಸಕರದ್ದು, ನಾಯಿಪಾಡು ಅನ್ನುವ ಸಿದ್ದರಾಮಯ್ಯ ಹೇಳಿಕೆಗೆ ಅವರು ತಿರುಗೇಟು ನೀಡಿದರು.
ಅವರು ದಿನನಿತ್ಯ ಪ್ರಚಾರದಲ್ಲಿ ಇರಲು, ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಡಿಕೆಶಿ ಕೈ ಮೇಲಾಗುತ್ತಿದೆ ಅನ್ನುವ ಕಾರಣಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಅನುಭವಿ ರಾಜಕಾರಣಿ ಈ ರೀತಿ ಮಾತನಾಡೋದು ಸರಿಯಲ್ಲ ಎಂದು ನಳಿನ್ ಟೀಕಿಸಿದರು.
ಉಪಚುನಾವಣೆಯಲ್ಲಿ ಬಿಜೆಪಿ ಎರಡು ಕ್ಷೇತ್ರದಲ್ಲಿ ಗೆಲುವು ನಿಶ್ಚಿತ. ಈ ಚುನಾವಣೆಯ ಫಲಿತಾಂಶದಿಂದ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಗೆದ್ದ ನಂತರ ಮುನಿರತ್ನರಿಗೆ ಸಚಿವ ಸ್ಥಾನ ನೀಡುವ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು. ಯತ್ನಾಳ್ ಅವರ ಹೇಳಿಕೆ ಬಗ್ಗೆ ಈಗಾಗಲೇ ಕರೆದು ಮಾತನಾಡಲಾಗಿದೆ. ಈ ಬಗ್ಗೆ ಪಕ್ಷದ ಹಿರಿಯರು ಕೂಡ ಅವರಿಗೆ ಹೇಳಿದ್ದಾರೆ ಎಂದು ನಳಿನ್ ಕುಮಾರ್ ಹೇಳಿದರು.
ಮಹದಾಯಿ ವಿಚಾರದಲ್ಲಿ ಗೋವಾದ ಪರವಾಗಿ ದಿನೇಶ್ ಗುಂಡೂರಾವ್ ಹೇಳಿಕೆ ಕಾಂಗ್ರೆಸ್ನ ಇಬ್ಭಾಗೆ ನೀತಿಗೆ ಒಂದು ಉದಾಹರಣೆ. ಇಲ್ಲಿರುವಾಗ ಒಂದು ರೀತಿ ಮಾತನಾಡಿದರೆ, ಅಲ್ಲಿರುವಾಗ ಒಂದು ಮಾತನಾಡುತ್ತಾರೆ. ಈ ಮೂಲಕ ಕಾಂಗ್ರೆಸ್ ರಾಜ್ಯದ ಏಳಿಗೆ ಪರವಾಗಿ ಇಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ ಎಂದು ನಳಿನ್ ಕುಮಾರ್ ಟಾಂಗ್ ನೀಡಿದರು.