ಸುಳ್ಯ: ರಸ್ತೆಯಲ್ಲಿ ಗುಂಡಿ ಇದೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವಿಚಾರದಲ್ಲಿ ಸುಳ್ಯದ ಖ್ಯಾತ ಆರ್ಜೆ ಹಾಗೂ ಯೂಟ್ಯೂಬರ್ ತ್ರಿಶೂಲ್ ವಿರುದ್ಧ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಸುಳ್ಯ ಪೊಲೀಸ್ ಠಾಣೆ ಮೆಟ್ಟಲೇರಿದ ಘಟನೆ ನಡೆದಿದೆ.
ಘಟನೆ ವಿವರ : ಸುಳ್ಯ ನಗರದ ಶ್ರೀರಾಂಪೇಟೆಯಿಂದ ಜೂನಿಯರ್ ಕಾಲೇಜಿಗೆ ತಿರುಗುವ ರಸ್ತೆಯಲ್ಲಿ ದೊಡ್ಡ ಹೊಂಡ-ಗುಂಡಿಗಳಿವೆ. ಇದರಿಂದ ಸಾರ್ವಜನಿಕರು ಕಿರಿ ಕಿರಿ ಅನುಭವಿಸುತ್ತಿದ್ದರು. ಈ ಕುರಿತು ಆರ್ಜೆ ತ್ರಿಶೂಲ್ ಇತ್ತೀಚೆಗೆ ರಸ್ತೆ ಅವ್ಯವಸ್ಥೆಯ ಕುರಿತು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಇದು ವೈರಲ್ ಆಗುತ್ತಿದಂತೆ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ತ್ರಿಶೂಲ್ ಅವರಿಗೆ “ಕೀ ಬೋರ್ಡ್ ವಾರಿಯರ್” ಎಂದು ಕಮೆಂಟ್ ಹಾಕಿದ್ದರು. ಇದರಿಂದ ಅಸಮಾಧಾನಗೊಂಡ ತ್ರಿಶೂಲ್ ತಮ್ಮ ಫೇಸ್ಬುಕ್ನಲ್ಲಿ ನಾನು ಸಮಸ್ಯೆಯೊಂದಿಗೆ ಬರುತ್ತೇನೆ ಅಧ್ಯಕ್ಷರೇ. ತಾವು ಲೈವ್ನಲ್ಲಿ ಬಂದು ಉತ್ತರಿಸಿ ಎಂದು ನ.ಪಂ ಅಧ್ಯಕ್ಷರಿಗೆ ಸವಾಲೆಸೆದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿ ತ್ರಿಶೂಲ್ ನಡೆಯನ್ನು ಹಲವರು ಬೆಂಬಲಿಸಿದ್ದರು.
ನಂತರದಲ್ಲಿ ಆ.14 ರಂದು ತ್ರಿಶೂಲ್ ನ.ಪಂ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಸವಾಲು ಸ್ವೀಕರಿಸುವಂತೆ ಕೇಳಿಕೊಂಡಿದ್ದರು. ಅವರಿಬ್ಬರ ಈ ಫೋನ್ ಸಂಭಾಷಣೆಯ ಆಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿತ್ತು. ಈ ಬಗ್ಗೆ ನ.ಪಂ ಅಧ್ಯಕ್ಷ ವಿನಯ ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ತ್ರಿಶೂಲ್ ವಿರುದ್ಧ ದೂರು ನೀಡಿ, “ನನ್ನ ಅನುಮತಿಯಿಲ್ಲದೇ ಆಡಿಯೋ ರೆಕಾರ್ಡ್ ಮಾಡಿ ಫೇಸ್ಬುಕ್ನಲ್ಲಿ ಪ್ರಸಾರ ಮಾಡಿ ಅವರ ಸ್ನೇಹಿತರಿಂದ ಅವಾಚ್ಯವಾಗಿ ಕಾಮೆಂಟ್ ಹಾಕಿಸಿದ್ದಾರೆಂದು” ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ತನಗೆ ಫೋನ್ ಮಾಡಿ ವಿಚಾರಣೆಗಾಗಿ ಠಾಣೆಗೆ ಬರುವಂತೆ ಬುಲಾವ್ ನೀಡಿದ್ದಾರೆ ಎಂದು ಆರ್ಜೆ ತ್ರಿಶೂಲ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಖೋಟಾ ನೋಟು ಚಲಾವಣೆ: ಬಿಜೆಪಿ ಸಾಮಾಜಿಕ ಜಾಲತಾಣ ಸದಸ್ಯ ಸೇರಿ ಮೂವರ ಬಂಧನ