ಮಂಗಳೂರು: ಕೋಮುಸೂಕ್ಷ್ಮ ವಲಯವೆಂದು ಬಿಂಬಿತವಾಗಿರುವ ದ.ಕ. ಜಿಲ್ಲೆಯಲ್ಲಿ ಈ ಬಾರಿಯ ಅತಿವೃಷ್ಟಿಯಿಂದ ಜಾತಿ-ಧರ್ಮಗಳ ತಡೆಗೋಡೆಗಳು ಮುರಿದುಬಿದ್ದಿವೆ. ಎಷ್ಟೋ ಕಡೆಗಳಲ್ಲಿ ಸಂಕಷ್ಟಗಳಿಗೆ ಸಿಲುಕಿರುವ ಹಿಂದೂ ಕುಟುಂಬಗಳಿಗೆ ಮುಸ್ಲಿಂ ಬಾಂಧವರು, ಮುಸ್ಲಿಂ ಕುಟುಂಬಗಳಿಗೆ ಹಿಂದೂ ಯುವಕರು ಸಹಾಯ ಮಾಡಿದ ಉದಾಹರಣೆಗಳಿವೆ. ಇಂತಹದ್ದೇ ಮತ್ತೊಂದು ಘಟನೆ ಮಂಗಳೂರು ನಗರದ ಹೊರವಲಯದಲ್ಲಿರುವ ಇನೋಳಿಯಲ್ಲಿ ನಡೆದಿದೆ.
ಕಳೆದ ವಾರ ಸುರಿದಿದ್ದ ಮಹಾಮಳೆಯಿಂದ ಇನೋಳಿಯ ಪೊರ್ಸೋಟ ಜಯಂತ್ ಹಾಗೂ ಸತ್ಯವತಿ ದಂಪತಿಯ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಗೊಳಗಾಗಿ ನೀರು ಒಳಗೆ ಸೋರುತಿತ್ತು. ಕಂಪೌಂಡ್ ಕೂಡಾ ಕುಸಿದ ಪರಿಣಾಮ ಈ ಕುಟುಂಬಕ್ಕೆ ತೀವ್ರ ಸಂಕಷ್ಟ ಎದುರಾಗಿತ್ತು. ಇದರಿಂದ ಮನೆ ನೀರಿನಿಂದ ತೇವಗೊಂಡು ಮೇಲ್ಛಾವಣಿಯೇ ಕುಸಿಯುವ ಹಂತದಲ್ಲಿದೆ. ಹೀಗಾಗಿ ಅಲ್ಲಿ ವಾಸಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಮನೆಯೊಳಗೆ ನೀರು ಸೋರಿಕೆಯಾದರೂ ಕುಟುಂಬಸ್ಥರಿಗೆ ಸ್ಥಳಾಂತರಗೊಳ್ಳಲು ಬೇರೆ ವ್ಯವಸ್ಥೆ ಇರದೇ ಇದೇ ಮನೆಯಲ್ಲಿ ಹಗಲುರಾತ್ರಿ ಕಳೆಯತ್ತಿದ್ದರು. ಈ ವೇಳೆ ಇವರ ದುಃಸ್ಥಿತಿಯನ್ನು ಕಂಡು ಎಸ್ಕೆಎಸ್ಎಸ್ಎಫ್ ಸಂಘಟನೆ ತಕ್ಷಣ ಈ ಕುಟುಂಬಕ್ಕೆ ವಾಸಿಸಲು ತನ್ನ ಕಚೇರಿಯನ್ನೇ ನೀಡಿದೆ.
ಕಳೆದ ಎಂಟು ವರ್ಷಗಳ ಹಿಂದೆ ಇನೋಳಿಯ ಪೊರ್ಸೋಟದಲ್ಲಿ ಸ್ವಂತ ಮನೆಯನ್ನು ನಿರ್ಮಾಣ ಮಾಡಿದ್ದ ಜಯಂತ್-ಸತ್ಯವತಿ ದಂಪತಿ ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದರು. ಜಯಂತ್ ಕೂಲಿ ಕೆಲಸ ಮಾಡುತ್ತಿದ್ದರೆ, ಸತ್ಯವತಿಯವರು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ಮಕ್ಕಳಾದ ಸಂಜನಾ 9ನೇ ತರಗತಿಯಲ್ಲಿ ಹಾಗೂ ವಂಶಿಕಾ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ದಿನಗೂಲಿ ಸಂಬಳದಲ್ಲಿ ಬದುಕುತ್ತಿದ್ದ ಈ ಕುಟುಂಬಕ್ಕೆ ಮನೆ ಹಾನಿ ತೀವ್ರ ಆಘಾತವನ್ನೇ ಉಂಟು ಮಾಡಿತ್ತು. ಆದರೆ ಎಸ್ಕೆಎಸ್ಎಸ್ಎಫ್ ಸಂಘಟನೆಯು ಮೊನ್ನೆ ಮಂಗಳವಾರ(ಆಗಸ್ಟ್ 13) ರಂದು ಮನೆಗೆ ದೌಡಾಯಿಸಿ ತಕ್ಷಣ ಈ ಕುಟುಂಬವನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ತಮ್ಮ ಕಚೇರಿಗೆ ಸ್ಥಳಾಂತರಿಸಿ ಮಾನವೀಯತೆ ಮೆರೆದಿದೆ.
ಈ ಬಗ್ಗೆ ಸತ್ಯವತಿಯವರು ಮಾತನಾಡಿ, ಮೊನ್ನೆ ಸುರಿದ ಧಾರಾಕಾರ ಮಳೆಗೆ ನಮ್ಮ ಮನೆಯ ಮೇಲ್ಛಾವಣಿ ತೀವ್ರವಾಗಿ ಹಾನಿಗೊಳಗಾಗಿದೆ. ಈ ಸಂದರ್ಭ ಸೂರಿಲ್ಲದೆ ಕಂಗಾಲಾಗಿದ್ದ ನಮಗೆ ಎಸ್ಕೆಎಸ್ಎಸ್ಎಫ್ ತಂಡ ತಮ್ಮ ಕಚೇರಿಯಲ್ಲಿಯೇ ಆಶ್ರಯ ನೀಡಿದೆ. ಮಳೆ ಹಾನಿಯಿಂದ ನಮಗೆ ಪರಿಹಾರ ದೊರಕುವಲ್ಲಿಯೂ ಶ್ರಮಿಸುತ್ತಿದೆ. ಬಾಡಿಗೆಯ್ನನೂ ಕೇಳದೆ ಯಾವುದೇ ರೀತಿಯ ಫಲಾಪೇಕ್ಷೆಯಿಲ್ಲದೆ ಸಂಘಟನೆ ಆಶ್ರಯ ನೀಡಿದೆ ಎಂದು ಧನ್ಯವಾದ ತಿಳಿಸಿದ್ರು.