ಮಂಗಳೂರು: ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಕಳನಾಡ್ನ ಚಳಯಂಗೋಡಿನ ಮೊಹಮ್ಮದ್ ನಜೀಬ್ ಯಾನೆ ಕಲ್ಲಟ್ರ ನಜೀಬ್ (46) ಬಂಧಿತ ಆರೋಪಿ. ಪ್ರಕರಣದಲ್ಲಿ ನೂರ್ ಅಲಿ, ರಶೀದ್ ಟಿ.ಎಸ್. ಹುಸೈನಬ್ಬ ಯಾನೆ ಹುಸೈನ್, ಮುತಾಸಿಂ ಯಾನೆ ತಸ್ಲಿಂ ಸಹಿತ ಹಲವರನ್ನು ಈ ಮೊದಲೇ ಬಂಧಿಸಲಾಗಿತ್ತು.
ಏನಿದು ಪ್ರಕರಣ: 2017ರ ಫೆಬ್ರುವರಿ 14ರಂದು ಮುಹಮ್ಮದ್ ಜಾಹಿದ್ ಎಂಬುವವರು ತನ್ನ ಸ್ನೇಹಿತ ಕಾಲಿಯಾ ರಫೀಕ್‌ನೊಂದಿಗೆ ಮುಜಿಬ್ ಹಾಗೂ ಫಿರೋಜ್ ಜೊತೆಯಲ್ಲಿ ತಡರಾತ್ರಿ 11:30ಕ್ಕೆ ಮಾರುತಿ ಕಾರಿನಲ್ಲಿ ಹೊಸಂಗಡಿಯಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ರಾತ್ರಿ 12 ಗಂಟೆಗೆ ಮಂಗಳೂರು ಕೋಟೆಕಾರು ಪೆಟ್ರೋಲ್ ಬಂಪ್ ತಲುಪಿದ್ದರು. ಈ ವೇಳೆ ಆರೋಪಿಗಳ ಪೈಕಿ ಚಾಲಕ ರಶೀದ್ ಹೊಂಚು ಹಾಕಿದಂತೆ ಪೆಟ್ರೋಲ್ ಬಂಕ್ ಬಳಿ ಟಿಪ್ಪರ್ ಲಾರಿ ನಿಲ್ಲಿಸಿದ್ದ. ಕಾಲಿಯಾ ರಫೀಕ್ ಇದ್ದ ಕಾರು ಎದುರು ಬರುತ್ತಿದ್ದಂತೆ ಆರೋಪಿ ಏಕಾಏಕಿ ಟಿಪ್ಪರ್‌ನ್ನು ಡಿಕ್ಕಿ ಹೊಡೆಸಿದ್ದಾನೆ. ಕಾರನ್ನು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿದ್ದಾನೆ.
ಇದರ ಮಧ್ಯೆ ಆರೋಪಿಗಳ ತಂಡದ ಮತ್ತೊಂದು ಎರ್ಟಿಕಾ ಕಾರು ಕಾಲಿಯಾ ರಫೀಕ್‌ನನ್ನು ಬೆನ್ನತ್ತಿಕೊಂಡು ಬಂದಿದೆ. ದುಷ್ಕರ್ಮಿಗಳ ಕೈಯಲ್ಲಿ ಸಿಕ್ಕಿಬೀಳುವುದು ಖಾತರಿಯಾಗುತ್ತಿದ್ದಂತೆ ಕಾಲಿಯಾ ರಫೀಕ್ ಮತ್ತು ಸಹಚರರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಮಯ ಆರೋಪಿಗಳ ಪೈಕಿ ನೂರ್ ಅಲಿ ಹಾಗೂ ಇನ್ನೋರ್ವ ಆರೋಪಿಯು ಪಿಸ್ತೂಲ್‌ನಿಂದ ಕಾಲಿಯಾ ರಫೀಕ್ ಮೇಲೆ ಗುಂಡು ಹಾರಿಸಿದ್ದಾರೆ. ಅಲ್ಲದೆ, ಇತರ ಆರೋಪಿಗಳು ಬೆನ್ನಟ್ಟಿ ತಲವಾರಿನಿಂದ ಕಡಿದು ಕೊಲೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದ ಮಂಗಳೂರು ಪೊಲೀಸರು ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಘಟನೆ ನಡೆದ ಸಮಯ ಕಾಲಿಯಾ ರಫೀಕ್ ಇದ್ದ ಕಾರು ಚಾಲಕ ಮುಹಮ್ಮದ್ ನಜೀಬ್ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಆರೋಪಿಸಲಾಗಿತ್ತು. ಕೃತ್ಯದ ನಂತರ ಈತ ತಲೆಮರೆಸಿಕೊಂಡು ಮುಂಬೈ, ಬೆಂಗಳೂರು, ಎರ್ನಾಕುಳಂ ಹೀಗೆ ದೇಶದ ವಿವಿಧೆಡೆ ತಿರುಗಾಡುತ್ತಿದ್ದ. ಈತನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಆರೋಪಿ ಮುಹಮ್ಮದ್ ನಜೀಬ್ ಪ್ರಕರಣದ ಪ್ರಮುಖ ಆರೋಪಿ ಝೀಯಾ ಹಾಗೂ ಇತರರೊಂದಿಗೆ ಸೇರಿಕೊಂಡು ಸಂಚು ರೂಪಿಸಿ ಕೊಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಆರೋಪಿ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು, ಬೇಕಲ, ನೀಲೇಶ್ವರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ವಂಚನೆ ಪ್ರಕರಣ ಸೇರಿ ಹೀಗೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.