ನೆಲ್ಯಾಡಿ (ದಕ್ಷಿಣ ಕನ್ನಡ): ಕೊಲೆ ಆರೋಪದಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದ ಕೇರಳದ ಮಲಪ್ಪುರಂನ ವ್ಯಕ್ತಿಯೋರ್ವ ಕರ್ನಾಟಕಕ್ಕೆ ಬಂದು ಮಹಿಳೆಯೊಬ್ಬರ ಸ್ಕೂಟಿ ಕದ್ದು ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಗುಂಡ್ಯ ಎಂಬಲ್ಲಿ ನಡೆದಿದೆ. ಬಂಧಿತನನ್ನು ವಿನೀಶ್ (21) ಎಂದು ಗುರುತಿಸಲಾಗಿದೆ. ಈತ ಕೋಯಿಕೋಡ್ ಮಾನಸಿಕ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಹೇಳಲಾಗಿದೆ.
ಬಂಧಿತನನ್ನು ಕೊಲೆಯೊಂದರ ಆರೋಪಿ ಎನ್ನಲಾಗಿದ್ದು, ಈತ ಸ್ವಾತಂತ್ರ್ಯ ದಿನಾಚರಣೆಯಂದು ಕೇರಳದ ಕಣ್ಣೂರು ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ತಿಳಿದು ಬಂದಿದೆ. ಅದೇ ದಿನ ಈತ ಕರ್ನಾಟಕಕ್ಕೆ ಬಂದು ಕಾಲೇಜೊಂದರ ಉಪನ್ಯಾಸಕಿಯ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದ್ದು, ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಎಂಜಿರ ಮಲ್ನಾಡ್ ಢಾಬಾದ ಸಮೀಪದಲ್ಲಿ ದಿನಸಿ ಖರೀದಿಸಲು ಹೋಗಿದ್ದ ಉಪನ್ಯಾಸಕಿಯ ಸ್ಕೂಟಿಯನ್ನು ಎಗರಿಸಿದ್ದ ಆರೋಪಿ, ಅಲ್ಲಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾನೆ ಎನ್ನಲಾಗಿದೆ. ಬಳಿಕ ಅಂಗಡಿಯಿಂದ ವಾಪಸ್ ಬಂದ ಉಪನ್ಯಾಸಕಿ ಸ್ಕೂಟಿ ಕಾಣಿಸದಿದ್ದಾಗ ಈ ವಿಚಾರವನ್ನು ಸ್ಥಳೀಯರಿಗೆ ತಿಳಿಸಿದ್ದಾರೆ. ಸ್ಥಳೀಯರು ಈ ವಿಚಾರವನ್ನು ವಾಟ್ಸ್ಆ್ಯಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದು, ಇದರಿಂದಾಗಿ ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಆರೋಪಿ ವಿನೀಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಕೂಟಿ ಕಳ್ಳತನವಾದ ಪ್ರದೇಶ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈತ ಮಾನಸಿಕ ಅಸ್ವಸ್ಥನಂತೆ ವರ್ತನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಕೇರಳ ಪೊಲೀಸರಿಗೆ ಮಾಹಿತಿ ಕೊಟ್ಟು, ಕೇರಳದ ಪೊಲೀಸರು ಧರ್ಮಸ್ಥಳಕ್ಕೆ ಬಂದು ವಿನೀಶ್ ನನ್ನು ಕೇರಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕುಡಿದು ವಾಹನ ಚಾಲನೆ.. ಬೆಳಗಾವಿ ಚೆನ್ನಮ್ಮ ಪುತ್ಥಳಿಗೆ ಡಿಕ್ಕಿ ಹೊಡೆದ ಲಾರಿ