ಮಂಗಳೂರು: ಕಳೆದ 8 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಿನ 25 ವರ್ಷಗಳಿಗೆ ದೇಶದ ಸಮೃದ್ಧಶೀಲ ಭವಿಷ್ಯಕ್ಕೆ ಭದ್ರ ತಳಹದಿಯನ್ನು ಹಾಕುವ ಮಹತ್ತರವಾದ ಕೆಲಸ ಮಾಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ಮಂಗಳೂರಿನ ಕೆನರಾ ಕಾಲೇಜಿನ ಸುಧೀಂದ್ರ ಸಭಾ ಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಠದ ಬಜೆಟ್ ವಿಶ್ಲೇಷಣೆ-2023ರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಯಲು ಶೌಚ ಮುಕ್ತ ಗ್ರಾಮ: ಕೇಂದ್ರ ಸರ್ಕಾರ ದೇಶದ ಭವಿಷ್ಯದ ದೃಷ್ಟಿಯಿಂದ ಕಳೆದ 8 ವರ್ಷಗಳಲ್ಲಿ ಈವರೆಗೆ ಬ್ಯಾಂಕ್ ಖಾತೆಯೇ ಇಲ್ಲದ 49 ಕೋಟಿ ಮಂದಿಗೆ ಮೊಟ್ಟ ಮೊದಲ ಬಾರಿಗೆ 'ಜನ್ ಧನ್' ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಮಾಡಿದೆ. 12 ಕೋಟಿಗಳಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಿ 'ಬಯಲು ಶೌಚ ಮುಕ್ತ ಗ್ರಾಮ'ಗಳನ್ನು ನಿರ್ಮಾಣ ಮಾಡಿದೆ ಎಂದು ಹೇಳಿದರು.
5ನೇ ದೊಡ್ಡ ಆರ್ಥಿಕ ಶಕ್ತಿ: 2014ರ ಬಳಿಕ ಮೋದಿ ನೇತೃತ್ವದ ಸರ್ಕಾರದ ನಿರಂತರ ಪ್ರಯತ್ನದ ಫಲವಾಗಿ ಪ್ರಪಂಚದ 5ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. 2014ರಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಿಗೆ ಹೋಲಿಕೆ ಮಾಡಿದ್ದಲ್ಲಿ ಭಾರತದ ಆರ್ಥಿಕತೆಯ ಗಾತ್ರ ಪ್ರಪಂಚದ 10ನೇ ಅತೀದೊಡ್ಡ ಆರ್ಥಿತೆಯಾಗಿತ್ತು. ಆದರೆ ಇಂದು 200 ವರ್ಷಗಳ ಕಾಲ ಆಳಿದ ಬ್ರಿಟನ್ ಅನ್ನು ಹಿಂದಿಕ್ಕಿ ಭಾರತ ಪ್ರಪಂಚದ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ ಎಂದರು.
ಭರಪೂರ ಉದ್ಯೋಗ ಸೃಷ್ಟಿ: 2014-2023ರ ನಡುವೆ ಭಾರತೀಯರ ತಲಾ ಆದಾಯ ದ್ವಿಗುಣಗೊಂಡಿದೆ. ಈ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಹೆಚ್ಚು ಜನರನ್ನು ಬಡತನ ರೇಖೆಯಿಂದ ಹೊರಗಡೆ ತಂದು ತಲಾ ಆದಾಯ ದ್ವಿಗುಣಗೊಂಡಿರುವ ಏಕೈಕ ದೇಶ ಭಾರತವಾಗಿದೆ. ಇನ್ನು ಇಪಿಎಫ್ ನೋಂದಣಿಯನ್ನು ಗಮನಿಸಿದ್ದಲ್ಲಿ ವಾರ್ಷಿಕವಾಗಿ ಅದು ಎಷ್ಟು ತೆರೆಯಲ್ಪಡುತ್ತದೋ ಅಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದರ್ಥ. ಇಪಿಎಫ್ ನೋಂದಣಿ 2014ರಲ್ಲಿ 9.50 ಕೋಟಿ ಇದ್ದದ್ದು ಈಗ 27.50 ಕೋಟಿಯಷ್ಟು ಹೆಚ್ಚಳವಾಗಿದೆ. ಈ ಮೂಲಕ ದೇಶದಲ್ಲಿ ಯುವಕರಿಗೆ ಮೋದಿ ಸರ್ಕಾರ ಭರಪೂರ ಉದ್ಯೋಗ ಸೃಷ್ಟಿಯನ್ನು ಮಾಡಿದೆ. ಆದರೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಅಂಕಿ- ಅಂಶಗಳನ್ನು ಪರಿಗಣಿಸದೆ, ವಾಸ್ತವತೆಗೆ ಕಣ್ಣು ಮುಚ್ಚಲ್ಪಟ್ಟು ಅವರ ರಾಜಕೀಯ ನಿರುದ್ಯೋಗವನ್ನು ದೇಶದ ಯುವಕರ ನಿರುದ್ಯೋಗ ಎಂದು ಗೊಂದಲಕ್ಕೊಳಗಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದರು.
ರಾಜ್ಯದ ಎಲ್ಲಾ ನಿರೀಕ್ಷೆಗಳಿಗೂ ಸ್ಪಂದನೆ: "ಸಮತೋಲಿತ, ಅತ್ಯಂತ ಪ್ರಗತಿಪರ, ಸರ್ವ ಸ್ಪರ್ಶಿ, ಸರ್ವ ವ್ಯಾಪ್ತಿ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ. ರಾಜ್ಯದ ಎಲ್ಲಾ ನಿರೀಕ್ಷೆಗಳಿಗೂ ಸ್ಪಂದನೆ ದೊರೆತಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ ಇಲಾಖೆಗೆ ಅನುದಾನ ಬರಲಿದೆ" ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದರು. "ಭಾರತದ ಆರ್ಥಿಕ ಸ್ಥಿತಿ ವಿಶ್ವದ ಇತರ ಪ್ರಗತಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಮುಂದುವರೆಯುತ್ತಿದೆ. ಬಹಳ ದೇಶಗಳಲ್ಲಿ ಆರ್ಥಿಕ ಸಂಕಷ್ಟವಿದೆ. ನಮ್ಮ ದೇಶದ ಆರ್ಥಿಕತೆ ಗಟ್ಟಿ ಅಡಿಪಾಯದ ಮೇಲಿದೆ. ಪ್ರಧಾನಿಯವರು ಮೂಲಭೂತ ಸುಧಾರಣೆ ತಂದಿದ್ದಾರೆ. ಹಾಗಾಗಿ, ನಮ್ಮ ಜಿಡಿಪಿ ಆರೋಗ್ಯಪೂರ್ಣವಾಗಿದೆ. ಬಜೆಟ್ನ ಪ್ರಮುಖ ಅಂಶ, ದೇಶದ ಆರ್ಥಿಕ ವೃದ್ಧಿಗೆ ಇನ್ನಷ್ಟು ಬಲ ನೀಡುತ್ತದೆ" ಎಂದು ಅವರು ವಿವರಿಸಿದ್ದರು.
ಇದನ್ನೂ ಓದಿ: ಬಜೆಟ್: ರಾಜ್ಯದ ನಿರೀಕ್ಷೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ: ಸಿಎಂ ಬೊಮ್ಮಾಯಿ
ಉಳ್ಳವರ ಪರ ಬಜೆಟ್: ಈ ಬಾರಿ ಕೇಂದ್ರ ಬಜೆಟ್ನಲ್ಲಿ ಅಕ್ಷರ, ಅನ್ನ, ಆರೋಗ್ಯ ಕ್ಷೇತ್ರವನ್ನು ಕಡೆಗಣನೆ ಮಾಡಲಾಗಿದೆ. ಅದರೊಂದಿಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳನ್ನು ಕಡೆಗಣಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಫೆ.1ರಂದು ಮಂಡಿಸಲಾದ ತಮ್ಮ ಪಕ್ಷದ ಬಜೆಟ್ ಅನ್ನೇ ಟೀಕಿಸಿದ್ದರು. ಮೈಸೂರಿನ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಾರಿ ಬಜೆಟ್ ನಲ್ಲಿ ಅಕ್ಷರ, ಆರೋಗ್ಯ , ಅನ್ನ ನೀಡುವ ಕ್ಷೇತ್ರಗಳನ್ನೂ ಕಡೆಗಣಿಸಿದೆ. ಈ ಮೂರು ಕ್ಷೇತ್ರ ದೇಶದ ಅಭಿವೃದ್ಧಿಗೆ ಅವಶ್ಯಕವಾಗಿದೆ. ಈ ಕಡೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕಿತ್ತು. ಆದರೆ ಈ ಕ್ಷೇತ್ರಗಳನ್ನು ಕಡೆಗಣನೆ ಮಾಡಿರುವುದು ಸರಿಯಲ್ಲ.ಇದರ ಜೊತೆಗೆ ವಿವಿಧ ಇಲಾಖೆಗಳಿಗೆ ನೀಡಿರುವ ಅನುದಾನವನ್ನು ಈ ಬಜೆಟ್ ನಲ್ಲಿ ಕಡಿತ ಮಾಡಲಾಗಿದೆ. ಇದರ ಜೊತೆಗೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಈ ಬಜೆಟ್ನಲ್ಲಿ ನಿರ್ಲಕ್ಷ್ಯ ಮಾಡಿದ್ದು. ಇದೊಂದು ಉಳ್ಳವರ ಪರ ಬಜೆಟ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಈ ಬಾರಿ ಕೇಂದ್ರದ ಬಜೆಟ್ನಲ್ಲಿ ಅಕ್ಷರ, ಆರೋಗ್ಯ, ಅನ್ನ ಕಡೆಗಣನೆ: ಎಚ್ ವಿಶ್ವನಾಥ್