ಮಂಗಳೂರು: ಕಂದಾಯ ಇಲಾಖೆ, ಜಿಲ್ಲಾಧಿಕಾರಿ, ತಹಶೀಲ್ದಾರ್ ನೇತೃತದಲ್ಲಿ ಹತ್ತು ದಿನಕ್ಕೊಂದು ಬಾರಿ ಪ್ರಗತಿ ಪರಿಶೀಲನಾ ಸಭೆ ಕರೆದು ಯೋಜನೆಗಳಿಗೆ ವೇಗ ಕೊಡುವ ಕಾರ್ಯ ನಡೆಸಬೇಕೆಂದು ಸಂಸದ ನಳೀನ್ ಕುಮಾರ್ ಕಟೀಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾಗದ ಸಮಸ್ಯೆ ಫಲಾನುಭವಿಗಳ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲು ಹತ್ತು ದಿನಗಳಿಗೊಂದು ಬಾರಿ ಸಭೆ ನಡೆಸಿದ್ದಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಾಧ್ಯ. ಇದರಿಂದ ಯೋಜನೆಗಳು ಫಲಾನುಭವಿಗಳಿಗೆ ಶೀಘ್ರ ತಲುಪಲು ಸಾಧ್ಯ.
ಇನ್ನೂ ಕೆಂಜಾರಿನಲ್ಲಿ ನಿರ್ಮಾಣವಾಗುವ ಕೋಸ್ಟ್ ಗಾರ್ಡ್ ಅಕಾಡೆಮಿಗೆ ಈಗಾಗಲೇ ಕೆಐಎಡಿಬಿ 158 ಎಕರೆ ಜಾಗವನ್ನು ಹಸ್ತಾಂತರಿಸಿದ್ದರೂ ಅಲ್ಲಿರುವ ಖಾಸಗಿ ಕಪಿಲಾ ಪಾರ್ಕ್ ಗೋಶಾಲೆಯವರು ತೆರವುಗೊಳ್ಳಲು ನಿರಾಕರಿಸುತ್ತಿದ್ದಾರೆ. ಆ ಖಾಸಗಿ ಗೋಶಾಲೆಯು ಸರ್ಕಾರಿ ಜಾಗದಲ್ಲಿದ್ದಲ್ಲಿ ತಕ್ಷಣ ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಿ ಎಂದು ಹೇಳಿದರು.