ಮಂಗಳೂರು: ಕಳೆದ ಐದು ವರ್ಷಗಳಲ್ಲಿ ಭಾರತ ಸ್ಟಾರ್ಟ್ ಅಪ್ನಲ್ಲಿ ಪ್ರಪಂಚದಲ್ಲೇ ಐದನೇ ಸ್ಥಾನದಲ್ಲಿದೆ. ಇದು ಯುವ ಭಾರತದ ಸಾಧನೆ ಎಂದು ಸಂಸದ ಅನುರಾಗ್ ಠಾಕೂರ್ ಹೇಳಿದರು.
ಪ್ರಪಂಚದ ಎಲ್ಲರೂ ಭಾರತದಲ್ಲಿ ಹೂಡಿಕೆ ಮಾಡಲು ಕಾತರರಾಗಿದ್ದಾರೆ. ಯುವಕರು ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮವು ನಮ್ಮ ಆರ್ಥಿಕ ಕ್ಷೇತ್ರದ ಬೆನ್ನೆಲುಬಾಗಿದೆ. ಈ ವಲಯದಿಂದ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ನಮ್ಮ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ರಾಷ್ಟ್ರದ ಒಳಿತಿಗಾಗಿ. ಇದೆಲ್ಲವೂ ಈಗ ಸ್ವಲ್ಪ ಕ್ಲಿಷ್ಟ ಕಾನೂನು ಎನಿಸಿದರೂ ಮುಂದಿನ ವರ್ಷಗಳಲ್ಲಿ ಜನತೆಗೆ ಉತ್ತಮ ಆರ್ಥಿಕ ಅನುಕೂಲಕತೆ ದೊರೆಯಲಿದೆ ಎಂದ್ರು.
ಎನ್‌ಡಿಎ ಸರ್ಕಾರ ಎರಡನೇ ಬಾರಿಗೆ ಬಂದ ಮೊದಲಿಗೇ ಆರ್ಟಿಕಲ್ 370 ರದ್ದುಗೊಳಿಸಿದೆ. ತ್ರಿವಳಿ ತಲಾಖ್ ರದ್ದುಗೊಳಿಸಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರಕುವಂತೆ ಮಾಡಿದೆ. ಎಲ್ಲಾ ಭಾರತೀಯರ ಬಹು ವರ್ಷಗಳ ಕನಸು ರಾಮ ಮಂದಿರ ಇನ್ನೇನು ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರ ಸಾಕಷ್ಟು ಆಲೋಚನೆ ಮಾಡಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತಿದೆ. ಆದ್ದರಿಂದಲೇ ಸಾಕಷ್ಟು ವಿದೇಶಿ ಉದ್ಯಮಗಳು ಭಾರತಕ್ಕೆ ಬರುತ್ತಿವೆ. ಇದು ಸಾಕಷ್ಟು ಉದ್ಯೋಗ ಹಾಗೂ ಸ್ವ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ ಎಂದು ಸಂಸದ ಅನುರಾಗ್ ಠಾಕೂರ್ ಹೇಳಿದರು.