ಮಂಗಳೂರು: ಜಿಲ್ಲೆಯ ಸುರತ್ಕಲ್ ಟೋಲ್ ಗೇಟ್ ನಲ್ಲಿ ಪ್ರಯಾಣಿಕರ ಸುಲಿಗೆ ನಡೆಯುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಎಚ್ಚರಿಕೆ ನೀಡಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ಅವರು, ಉಡುಪಿ-ಮಂಗಳೂರು ನಡುವೆ ಕೆಲವೇ ಕಿಲೋಮೀಟರ್ ಅಂತರದಲ್ಲಿ ಹೆಜಮಾಡಿ ಮತ್ತು ಸುರತ್ಕಲ್ ನಲ್ಲಿ ಎರಡು ಟೋಲ್ ಗೇಟ್ ಇವೆ. ಇದರಲ್ಲಿ ಸುರತ್ಕಲ್ ನಲ್ಲಿರುವುದು ಸಕ್ರಮ ಟೋಲ್ ಗೇಟ್ ಅಲ್ಲ. ಆದರೂ ಅಲ್ಲಿ ಹೆಜಮಾಡಿ ಟೋಲ್ ಗೇಟ್ ಗಿಂತ ಹೆಚ್ಚು ಸುಂಕ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಟೋಲ್ ಗೇಟ್ ಸಂಸದರು, ಶಾಸಕರುಗಳ ಬೆಂಬಲದಿಂದ ನಡೆಯುತ್ತಿದ್ದು, ಇದರ ಹಿಂದೆ ಭ್ರಷ್ಟಾಚಾರ ನಡೆಯುತ್ತಿರುವ ಸಂಶಯ ಇದೆ ಎಂದರು.
ಸದ್ಯ ಕೊರೊನಾ ಹಿನ್ನೆಲೆ ಪ್ರತಿಭಟನೆಗಳಿಗೆ ನಿರ್ಬಂಧ ಇರುವುದರಿಂದ ಇನ್ನೂ ಪ್ರತಿಭಟನೆಗೆ ಮುಂದಾಗಿಲ್ಲ. ಆದರೆ, ನಿರ್ಬಂಧ ತೆರವು ಅದ ಕೂಡಲೇ ಕೆಆರ್ ಎಸ್ ನಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.