ಮಂಗಳೂರು : ಬಸ್ನಲ್ಲಿ ಅನ್ಯಮತೀಯ ಜೋಡಿ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್, ರಾಘವೇಂದ್ರ, ರಂಜಿತ್ ಮತ್ತು ಪವನ್ ಬಂಧಿತರು.
ಈ ಕುರಿತಂತೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಅನ್ಯಮತೀಯ ಯುವಕ ಮತ್ತು ಯುವತಿಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು.
ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಸುವುದು ಮತ್ತು ಯುವತಿಯ ಗೌರವಕ್ಕೆ ಧಕ್ಕೆ ತಂದಿರುವ ಕುರಿತಂತೆ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಯುವತಿ ಉಡುಪಿ ಜಿಲ್ಲೆಯವರಾಗಿದ್ದು, ಯುವಕ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಇವರ ಪೋಷಕರನ್ನು ಕರೆಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡು ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Watch.. ಮಂಗಳೂರು ಉಡುಪಿ ಬಸ್ನಲ್ಲಿ ಅನ್ಯಮತೀಯ ಜೋಡಿ: ಬಸ್ ನಿಂದ ಕೆಳಗಿಳಿಸಿ ಅನೈತಿಕ ಪೊಲೀಸ್ ಗಿರಿ
ಹಲ್ಲೆ:
ಮಂಗಳೂರಿನ ನೀರುಮಾರ್ಗ ಪಡು ಎಂಬಲ್ಲಿ ಯುವತಿಯೊಂದಿಗಿದ್ದ ಎಂಬ ಕಾರಣಕ್ಕೆ ಯುವಕನಿಗೆ ಮಾಡಿದ ಹಲ್ಲೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.ರಿಯಲ್ ಎಸ್ಟೇಟ್ ಉದ್ಯಮಿ ಅಬ್ದುಲ್ ರಿಯಾಜ್ ಎಂಬವರು ತಮ್ಮ ಕಾರಿನಲ್ಲಿ ಬರುವಾಗ ನೀರುಮಾರ್ಗದ ಪಡ್ಪು ಎಂಬಲ್ಲಿ ರಾಡ್ ಮತ್ತು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವುದರಿಂದ, ವೈದ್ಯರ ಸೂಚನೆ ಹಿನ್ನೆಲೆಯಲ್ಲಿ ಗಾಯಾಳುವಿನ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಇವರ ಕಾರಿನಲ್ಲಿ ಮಹಿಳೆ ಇದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ನಮಗೆ ಅವರ ಕಾರಿನಲ್ಲಿ ಮಹಿಳೆಯರು ಧರಿಸುವ ಚಪ್ಪಲಿ ಮತ್ತು ಇತರ ದಾಖಲೆಗಳು ಸಿಕ್ಕಿದೆ. ಇದು ಅವರ ಕುಟುಂಬದವರದೆ ಅಥವಾ ಬೇರೆಯೆ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಘಟನೆ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮಾಹಿತಿ ನೀಡಿದರು.