ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹೆಸರುವಾಸಿ. ಬುದ್ದಿವಂತರ ಜಿಲ್ಲೆ ಎಂದು ಕರೆಯಲ್ಪಡುವ ಈ ಜಿಲ್ಲೆಗಳಲ್ಲಿ ನೈತಿಕ ಪೊಲೀಸ್‌ಗಿರಿ ಎಂಬುದು ಕಪ್ಪು ಚುಕ್ಕೆಯಾಗಿದೆ. ಸರಕಾರಗಳು ಬದಲಾದರೂ ಇಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಕಡಿವಾಣ ಬೀಳದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ಗಿರಿ ಎಂಬುದು ಸಾಮಾನ್ಯವಾಗಿಬಿಟ್ಟಿದೆ. ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ನಿರಂತರವಾಗಿ ನಡೆಯುತ್ತಿದೆ. ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ದಶಕಗಳಿಂದಲೂ ನಡೆಯುತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯುತ್ತಿದ್ದ ಪ್ರಕರಣಗಳನ್ನು ನಮ್ಮ ಸರಕಾರ ಬಂದರೆ ನಿಗ್ರಹಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದ್ದರೂ ಕಾಂಗ್ರೆಸ್ ಸರಕಾರ ಬಂದಿದ್ದು, ತಡೆಯಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರಕಾರ ಬಂದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಪ್ರಕರಣ ಮತ್ತು ಉಡುಪಿ ಜಿಲ್ಲೆಯಲ್ಲಿ 1 ಪ್ರಕರಣ ವರದಿಯಾಗಿದೆ.
ಘಟನೆ 1 : ಜೂನ್ 1 ಸಮುದ್ರ ವಿಹಾರಕ್ಕೆಂದು ಬಂದಿದ್ದ ಕೇರಳ ಮೂಲದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಹಿಂಬಾಲಿಸಿದ ತಂಡವೊಂದು ದಾಳಿ ನಡೆಸಿ ನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿತ್ತು.
ಘಟನೆ 2 : ಜುಲೈ 21ರಂದು ಪಣಂಬೂರು ಬೀಚ್ಗೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಯುವಕರ ಗುಂಪೊಂದು ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿ ನೈತಿಕ ಪೊಲೀಸ್‌ಗಿರಿ ನಡೆಸಿದ ಘಟನೆ ನಡೆದಿತ್ತು. ಮಂಗಳೂರಿನ ಮೆಡಿಕಲ್ ಕಾಲೇಜೊಂದರ 6 ವಿದ್ಯಾರ್ಥಿಗಳು ಪಣಂಬೂರು ಬೀಚ್ಗೆ ಹೋಗಿದ್ದರು.
ಘಟನೆ 3: ಜುಲೈ 27ರಂದು ರಾತ್ರಿ 10 ಗಂಟೆಯ ಸುಮಾರಿಗೆ ಬಿ.ಸಿ.ರೋಡಿನಿಂದ ಪೊಲೀಸ್ ವಸತಿ ಗೃಹಕ್ಕೆ ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿ ಕುಮಾರ್ ಮತ್ತು ಅವರ ಪತ್ನಿ ಮತ್ತು ಸಂಬಂಧಿಯವರನ್ನು ಹಿಂಬಾಲಿಸಿಕೊಂಡು ಹೋಗಿ ಪೊಲೀಸ್ ವಸತಿಗೃಹದ ಪರಿಸರದಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಲಾಗಿತ್ತು.
ಘಟನೆ 4: ಮಂಗಳೂರಿನಲ್ಲಿ ಪತ್ರಕರ್ತನ ಮೇಲೆ ನೈತಿಕ ಪೊಲೀಸ್‌ಗಿರಿ ಜುಲೈ 28ರಂದು ನಡೆದಿತ್ತು. ಮಾಧ್ಯಮ ವರದಿಗಾರನ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದರು. ಸ್ನೇಹಿತೆಯ ಜೊತೆ ಊಟಕ್ಕೆ ತೆರಳಿದ್ದ ವರದಿಗಾರ ಅಭಿಜಿತ್ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿತ್ತು.
ಘಟನೆ 5: ಕಾರಿನಲ್ಲಿ ಹೋಗುತ್ತಿದ್ದ ವೈದ್ಯರು ಹಾಗೂ ಪ್ರಾಧ್ಯಾಪಕರನ್ನು ಅಡ್ಡಗಟ್ಟಿ ನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣ ಆಗಷ್ಟ್ 1 ರಂದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿತ್ತು. ಮಂಗಳೂರಿನ ಕಾಲೇಜೊಂದರ ನಾಲ್ವರು ವೈದ್ಯರು ಮತ್ತು ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಅವರೊಂದಿಗೆ ಒಂದೇ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನೈತಿಕ ಪೊಲೀಸ್‌ಗಿರಿ ನಡೆದಿತ್ತು.
ಘಟನೆ 6: ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಮೆರೆದ ಘಟನೆ ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ಆಗಷ್ಟ್ 2 ರಂದು ನಡೆದಿತ್ತು. ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿಗೆ ತೆರಳಲು ಉಜಿರೆಯಿಂದ ಪರಿಚಯಸ್ಥ ಆಟೋ ಚಾಲಕನಿಗೆ ಕರೆ ಮಾಡಿದ್ದಳು. ಆತ ಬಂದು ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ರಾತ್ರಿ ಸುಮಾರು 9 ಗಂಟೆಗೆ ಅವಳನ್ನು ಡ್ರಾಪ್ ಮಾಡಿ ಹಿಂದಿರುಗುವಾಗ ಅಪರಿಚಿತ ಯುವಕರ ತಂಡವೊಂದು ಪ್ರಶ್ನಿಸಿ, ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದರು.
ಆ್ಯಂಟಿ ಕಮ್ಯೂನಲ್ ವಿಂಗ್: ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಇಂಥ ಪ್ರಕರಣಗಳನ್ನು ತಡೆಯಲು ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಆರಂಭಿಸಲಾಗಿದೆ. ಗೃಹ ಸಚಿವ ಪರಮೇಶ್ವರ್ ಅವರು ಮಂಗಳೂರಿಗೆ ಭೇಟಿ ನೀಡಿದ ಮೊದಲ ದಿನವೇ ಮಂಗಳೂರು ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ನಡೆಸಿ ಆ್ಯಂಟಿ ಕಮ್ಯೂನಲ್ ವಿಂಗ್ ರಚನೆಯನ್ನು ಘೋಷಿಸಿದ್ದರು. ಈ ತಂಡ ನೈತಿಕ ಪೊಲೀಸ್ ಗಿರಿ ನಡೆಯದಂತೆ ತಡೆಯಲು ಮತ್ತು ಈ ಹಿಂದೆ ನಡೆದ ಪ್ರಕರಣಗಳ ಆರೋಪಿಗಳ ಮೇಲೆ ನಿಗಾ ಇಡುವ ಕಾರ್ಯವನ್ನು ಮಾಡುತ್ತಿದೆ.
ನಿರ್ದಾಕ್ಷಿಣ ಕ್ರಮ- ಸಿಎಂ ಎಚ್ಚರಿಕೆ: ನೈತಿಕ ಪೊಲೀಸ್‌ಗಿರಿ ಯಾರೇ ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ. 1ರಂದು ಮಂಗಳೂರಿನಲ್ಲಿ ಎಚ್ಚರಿಕೆ ನೀಡಿದ್ದರು. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶವಿಲ್ಲ. ಯಾರೇ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಗಡಿಪಾರು- ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ: ನೈತಿಕ ಪೊಲೀಸ್ ಗಿರಿ ಮೂಲಕ ಕಾನೂನು ಕೈಗೆತ್ತಿಕೊಳ್ಳುವುದು, ಅಂತವರನ್ನು ಗಡಿಪಾರು ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಗಸ್ಟ್ 1ರಂದು ತಿಳಿಸಿದ್ದರು.
ಮೂವರು ಗಡಿಪಾರು: ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಇತ್ತೀಚೆಗೆ ಗಡಿಪಾರು ಮಾಡುವ ಪ್ರಕ್ರಿಯೆ ಮಾಡಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಅವರು ಈಟಿವಿ ಭಾರತ ಜೊತೆಗೆ ಮಾತನಾಡಿ, "ಆ್ಯಂಟಿ ಕಮ್ಯೂನಲ್ ವಿಂಗ್ ಮೂಲಕ ನೈತಿಕ ಪೊಲೀಸ್ ಗಿರಿ ನಿಯಂತ್ರಣ ಮಾಡುವ ಕ್ರಮ ಕೈಗೊಳ್ಳಲಾಗುತ್ತಿದೆ. ಆ್ಯಂಟಿ ಕಮ್ಯೂನಲ್ ವಿಂಗ್ ಹಳೆಯ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಮೇಲೆ ನಿಗಾ ಇಡುವ ಕೆಲಸ ಮಾಡಲಾಗುತ್ತಿದೆ. ಮೊದಲ ಬಾರಿಯ ಆರೋಪಿಗಳ ಮಾಹಿತಿ ಪಡೆಯುವ ಕಾರ್ಯ ಅವರ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುವ ಕಾರ್ಯ ಮಾಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನೈತಿಕ ಪೊಲೀಸ್‌ಗಿರಿ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ