ಮಂಗಳೂರು: ಯುವತಿ ಮತ್ತು ಯುವಕ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಸಂಘಟನೆಯೊಂದರ ಕಾರ್ಯಕರ್ತರು ತಡೆದು ನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆ ನಗರದಲ್ಲಿ ಸೋಮವಾರ ಸಂಜೆ ನಡೆದಿದೆ. ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕಲ್ ಎಂಬಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೋರ್ಗನ್ಸ್ ಗೇಟ್ ಸಮೀಪದ ಮಂಕಿ ಸ್ಟಾಂಡ್‌ನಲ್ಲಿ ಘಟನೆ ವರದಿಯಾಗಿದೆ.
ಪಾಂಡೇಶ್ವರ ಬಳಿಯ ನಿವಾಸಿಯಾದ ಯುವಕ ಮತ್ತು ಯುವತಿ ಮುಳಿಹಿತ್ಲುವಿನಲ್ಲಿರುವ ಎಂ.ಎಸ್. ಸ್ಪೋರ್ಟ್ಸ್ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದರು. ಇವರು ಮೊಬೈಲ್ ರಿಪೇರಿ ಮಾಡಿಸಿಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದರು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಇಬ್ಬರು ಬೈಕ್‌ನಲ್ಲಿ ಬೆನ್ನಟ್ಟಿದ್ದಾರೆ. ಬೈಕ್ ಅಡ್ಡ ಹಾಕಿ ಯುವತ-ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಮತ್ತೊಂದು ಕೋಮಿನ ಯುವಕರು ಜಮಾಯಿಸಿದರು. ಆಗ ಗುಂಪಿನ ನಡುವೆ ಮಾತಿನ ಚಕಮಕಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳುತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು ಗುಂಪು ಚದುರಿಸಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಈ ರೀತಿಯ ಪ್ರಕರಣಗಳು ಆಗಾಗ್ಗೆ ದಾಖಲಾಗುತ್ತಿರುತ್ತವೆ. ಆಗಸ್ಟ್ನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿದ್ದು ಹಲ್ಲೆ ನಡೆಸಿದ್ದಾರೆಂದು ಯುವಕರ ಗುಂಪಿನ ವಿರುದ್ಧ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದರು. ಈ ವಿದ್ಯಾರ್ಥಿ ಮೂಡುಬಿದಿರೆ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಬಳಿ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಕಾರಣಕ್ಕೆ ಸಂಘಟನೆಯೊಂದಕ್ಕೆ ಸೇರಿದ ಮೂವರು ಯುವಕರು ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿತ್ತು.
ಇದಲ್ಲದೆ ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್‌ಗಿರಿ ಮೆರೆದ ಘಟನೆ ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ಆಗಸ್ಟ್ 2ರಂದು ನಡೆದಿತ್ತು. ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿಗೆ ತೆರಳಲು ಉಜಿರೆಯಿಂದ ಪರಿಚಯಸ್ಥ ಆಟೋ ಚಾಲಕನಿಗೆ ಕರೆ ಮಾಡಿದ್ದಳು. ಆತ ಬಂದು ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ರಾತ್ರಿ ಸುಮಾರು 9 ಗಂಟೆಗೆ ಅವಳನ್ನು ಡ್ರಾಪ್ ಮಾಡಿ ಹಿಂದಿರುಗುವಾಗ ಅಪರಿಚಿತ ಯುವಕರ ತಂಡವೊಂದು ಪ್ರಶ್ನಿಸಿ, ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದರು. ಜೂನ್ನಲ್ಲಿ ಸಮುದ್ರ ವಿಹಾರಕ್ಕೆಂದು ಬಂದಿದ್ದ ಕೇರಳ ಮೂಲದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಹಿಂಬಾಲಿಸಿದ ತಂಡವೊಂದು ದಾಳಿ ನಡೆಸಿ ನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿತ್ತು.
ಇದನ್ನೂ ಓದಿ: ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ಮೌಲ್ಯದ ಅಂಬರ್ ಗ್ರೀಸ್ ವಶ, ಮೂವರ ಬಂಧನ