ಮಂಗಳೂರು: ಬದುಕಿನಲ್ಲಿ ನಿರ್ದಿಷ್ಟ ಗುರಿ, ಬದ್ಧತೆ ಇದ್ದರೆ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಳೇ ವಿದ್ಯಾರ್ಥಿ ಸಂಘಟನೆ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ (ಮಾಮ್) ವತಿಯಿಂದ ಶುಕ್ರವಾರ ಆಳ್ವಾಸ್ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ನಡೆದ 2018-19ನೇ ಸಾಲಿನ ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಪತ್ರಿಕೋದ್ಯಮ ಇನ್ನಷ್ಟು ಬೆಳೆಯಬೇಕು. ಸಮಾಜಮುಖಿಯಾದ ಹೆಚ್ಚು ಹೆಚ್ಚು ಬರಹಗಳು ಮಾಧ್ಯಮದ ಮೂಲಕ ಹೊರ ಬರಬೇಕು ಎಂದು ಅವರು ತಿಳಿಸಿದರು.
ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ವಿಭಾ ಡೋಂಗ್ರೆ (ಪ್ರಥಮ), ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್‌ನ ವಿದ್ಯಾರ್ಥಿನಿ ಚೇತನಾ ನಾಯಕ್ ಕೆ. (ದ್ವಿತೀಯ), ಪದವಿ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಶ್ರೀಕಾಂತ್ ಪಿ. (ಪ್ರಥಮ), ಆಳ್ವಾಸ್ ಕಾಲೇಜಿನ ಸೋನಿಯ ಎಸ್.(ದ್ವಿತೀಯ) ಅವರಿಗೆ ಮಂಗಳೂರು ವಿವಿಯ ಕುಲಸಚಿವ ಡಾ.ಎ.ಎಂ.ಖಾನ್ ಹಾಗೂ ಡಾ.ಎಂ.ಮೋಹನ ಆಳ್ವ ಪ್ರಶಸ್ತಿ ಪ್ರದಾನ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ಮಾಮ್ ಪ್ರಶಸ್ತಿ ತೀರ್ಪುಗಾರ, ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿವಿ ಇಲ್ಲಿನ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಭಾಷೆಯ ಮೇಲಿನ ಹಿಡಿತದೊಂದಿಗೆ ಹೊಸತನ್ನು ಹುಡುಕುವ, ಶೋಧನೆಯ ಕೆಲಸ ಪತ್ರಕರ್ತರಿಂದ ಆಗಬೇಕು. ಅವಸರದ ಸುದ್ದಿಗಳಿಗೆ ಆದ್ಯತೆ ನೀಡದೇ, ನೈಜತೆ ತೆರೆದಿಡುವ ಸುದ್ದಿಗಳಿಗೆ ಒತ್ತು ನೀಡಬೇಕು. ಮಾಮ್ ಸಂಘಟನೆ ವಿದ್ಯಾರ್ಥಿಗಳ ಬರಹಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.