ಮಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ ದೇಶದಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಿದೆ. ಬಿಜೆಪಿಯ ಪರವಾಗಿನ ಅಲೆ ಎದ್ದಿದೆ. ನರೇಂದ್ರ ಮೋದಿಯವರ ಸುನಾಮಿ ದೇಶದಲ್ಲಿ ಎದ್ದು ಕಾಣುತ್ತಿದೆ. ಬಿಜೆಪಿ ದ.ಕ.ಜಿಲ್ಲೆಯಲ್ಲೂ ಅಭೂತಪೂರ್ವ ಗೆಲುವು ಸಾಧಿಸಿದೆ. ಎಂದು ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಹೇಳಿದರು.
ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಸಂಭ್ರಮದಲ್ಲಿರುವ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು. ಮಧ್ಯಾಹ್ನ ಸುರತ್ಕಲ್ ನಲ್ಲಿರುವ ಎನ್ ಐಟಿಕೆಯ ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಮತ ಎಣಿಕಾ ಕಾರ್ಯವನ್ನು ಪರಿಶೀಲನೆ ನಡೆಸಿದರು.
ಮತ್ತೊಮ್ಮೆ ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ನಳೀನರ ಮುಂದಿನ ಯೋಜನೆಯ ಕುರಿತು ಮಾಡಿದ ಪ್ರಶ್ನೆಗೆ ಮಾತನಾಡಿದ ಅವರು, ಚುನಾವಣೆಯ ಮತದಾನದ ಎಣಿಕೆ ಕಾರ್ಯ ಇನ್ನೂ ನಡೆಯುತ್ತಲೇ ಇದೆ. ಸರ್ಟಿಫಿಕೇಟ್ ಸಿಕ್ಕ ಬಳಿಕ ನಿಮ್ಮಲ್ಲಿ ಮಾತನಾಡುವೆ ಎಂದು ಹೇಳಿದರು.