ಸುಳ್ಯ (ದಕ್ಷಿಣ ಕನ್ನಡ): ಒಂದು ಕಡೆ ಕೊರೊನಾ ಮಹಾಮಾರಿಯ ಸಂಕಟ, ಇನ್ನೊಂದೆಡೆ ಡಿಜಿಟಲ್ ಇಂಡಿಯಾ ಮಾಡುವ ಹೋರಾಟ, ಮಗದೊಂದು ಕಡೆ ಆನ್ಲೈನ್ ಕ್ಲಾಸ್ಗಳು. ಆದರೆ, ಈ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಮೊಬೈಲ್ ಕಂಪನಿಗಳು ಸರಿಯಾದ ರೀತಿಯಲ್ಲಿ ನೆಟ್ವರ್ಕ್ ನೀಡದೇ ಜನರನ್ನು ದೋಚುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಈ ಹಿಂದೆ ನಾ ಮುಂದು, ತಾ ಮುಂದು ಎಂಬಂತೆ ಖಾಸಗಿ ಮೊಬೈಲ್ ಕಂಪನಿಗಳು ಗ್ರಾಮ ಗ್ರಾಮಗಳಲ್ಲಿ ತಮ್ಮ ಕಂಪನಿಯ ಒಡೆತನದ ಟವರ್ಗಳನ್ನು ಅಳವಡಿಸಿ 4ಜಿ, 3ಜಿ, 2ಜಿ ನೆಟ್ವರ್ಕ್ ಸೇವೆಗಳು ಎಂಬ ಹೆಸರಿನಲ್ಲಿ ಸೇವೆ ನೀಡಲು ಮುಂದಾಗಿತ್ತು. ಆದರೆ, ಇದೀಗ ಗ್ರಾಹಕರಿಗೆ ಈ ಸೇವೆ ಸಮರ್ಪಕವಾದ ರೀತಿಯಲ್ಲಿ ಸಿಗುತ್ತಿಲ್ಲ ಎಂಬುದು ಒಂದು ವಿಷಯವಾದರೆ, ದಿನಂಪ್ರತಿ 1.5, 2.0 ಜಿಬಿ ಡೇಟಾ, ಉಚಿತ ಕರೆ ಮತ್ತು ಸಂದೇಶ ಲೆಕ್ಕದಲ್ಲಿ ತಿಂಗಳಿಗೆ ಕನಿಷ್ಠ 249 ರೂಪಾಯಿ ರಿಚಾರ್ಜ್ ಮಾಡುವ ಗ್ರಾಹಕರು ದಿನದಲ್ಲಿ 1.5 ಜಿಬಿ ಬಿಟ್ಟು ಕನಿಷ್ಠ 0.5 ಡಾಟಾ ಬಳಸಲೂ ವಿಫಲರಾಗುತ್ತಿದ್ದಾರೆ.
ಅಂದರೆ ದಿನಂಪ್ರತಿ ಕನಿಷ್ಠ ಎಂದರೂ 1.0 ಜಿಬಿ ಡೇಟಾ ಖಾಸಗಿ ನೆಟ್ವರ್ಕ್ ಕಂಪನಿಗಳು ದೋಚುತ್ತಿದೆ ಎಂಬುದು ಸಾರ್ವಜನಿಕರ ಆರೋಪ. ಇದರ ಜೊತೆಗೆ ಸರಿಯಾದ ರೀತಿಯಲ್ಲಿ ಕರೆ ಮಾಡಲು ಸಾಧ್ಯವಾಗದೇ ಕರೆಯ ಮೊತ್ತವೂ ಗ್ರಾಹಕನಿಗೆ ನಷ್ಟವಾಗುತ್ತಿದೆ. ಟವರ್ ನಿರ್ಮಾಣ ಆಗಿರುವ ಪ್ರದೇಶದಲ್ಲೇ ಈ ಸಮಸ್ಯೆ ಎದುರಾಗಿದೆ ಎಂದರೆ ಒಳ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆ ಅತೀ ಹೆಚ್ಚಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬಹುತೇಕ ಎಲ್ಲ ಕಡೆಗಳಲ್ಲಿ, ಅದರಲ್ಲೂ ಸುಳ್ಯ, ಕಡಬ ತಾಲೂಕಿನ ಬಹುತೇಕ ಕಡೆ, ಗ್ರಾಮೀಣ ಪ್ರದೇಶಗಳಲ್ಲೂ ಈ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಹಲವಾರು ಗ್ರಾಹಕರು ಈಗಾಗಲೇ ಆಯಾ ಕಂಪನಿಯ ಗ್ರಾಹಕರ ದೂರು ವಿಭಾಗಕ್ಕೆ ದೂರು ನೀಡಿದ್ದರೂ, ಲಾಕ್ಡೌನ್ ನೆಪ ಹೇಳಿಕೊಂಡು ಸಮಸ್ಯೆ ಬಗೆಹರಿಸಲು ಕಂಪನಿ ಮುಂದಾಗುತ್ತಿಲ್ಲ.
ಟವರ್ ಸಮಸ್ಯೆ, ನೆಟ್ವರ್ಕ್ ಸಮಸ್ಯೆಗಳನ್ನ ಸರಿಪಡಿಸಲು ಲಾಕ್ಡೌನ್ ಅಡ್ಡಿಯಾಗುತ್ತದೆಯೇ ಎಂಬುದು ಗ್ರಾಹಕರ ಸಂಶಯ. ಒಂದೆರಡು ಬಾರಿ ಗ್ರಾಹಕರ ದೂರು, ದೂರು ಘಟಕದಲ್ಲಿ ದಾಖಲಾದರೆ ಮತ್ತೆ ದೂರು ನೀಡಲು ಸಾಧ್ಯವಾಗಲ್ಲ. ಮಾತ್ರವಲ್ಲದೇ ನಿಮ್ಮ ಈ ಹಿಂದಿನ ದೂರು ಪ್ರಗತಿಯಲ್ಲಿದೆ ಎಂಬ ಉತ್ತರ ನೀಡಲಾಗುತ್ತದೆ. ಆದರೆ, ಒಂದು ತಿಂಗಳ ಹಿಂದೆ ನೀಡಿದ ದೂರುಗಳನ್ನು ಈ ತನಕ ಇತ್ಯರ್ಥ ಮಾಡಿಕೊಳ್ಳಲು ಮೊಬೈಲ್ ಕಂಪನಿಗಳು ಮುಂದಾಗಿಲ್ಲ.
ಇನ್ನೊಂದು ಕಡೆ ಡಿಜಿಟಲ್ ಇಂಡಿಯಾ ಘೋಷಣೆ ಆಗಿದೆ. ಟವರ್ಗಳು ಇದ್ದರೂ, ನೆಟ್ವರ್ಕ್ ಇಲ್ಲದೇ ಇದು ಹೇಗೆ ಸಾಧ್ಯ ಎಂಬುದು ಒಂದು ಪ್ರಶ್ನೆಯಾಗಿದೆ. ಮಾತ್ರವಲ್ಲದೇ ಈ ನೆಟ್ವರ್ಕ್ ಸಮಸ್ಯೆಯಿಂದಾಗಿ ಬಹುತೇಕ ಎಲ್ಲ ಸರಕಾರಿ ಹಾಗೂ ಖಾಸಗಿ ಕಚೇರಿಗಳ ಕೆಲಸಗಳೂ ನಡೆಯುತ್ತಿಲ್ಲ. ಈಗಾಗಲೇ ಎಲ್ಲ ಕಡೆಗಳಲ್ಲಿ ಶಾಲಾ ಮಕ್ಕಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿದೆ. ನೆಟ್ವರ್ಕ್ ಸರಿಯಾದ ರೀತಿಯಲ್ಲಿ ಲಭ್ಯವಾಗದ ಕಾರಣ ಮಕ್ಕಳ ಭವಿಷ್ಯಕ್ಕೂ ಇದು ಕಂಟಕವಾಗಿ ಪರಿಣಮಿಸುತ್ತಿದೆ.
ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಗ್ರಾಹಕರನ್ನು ಕೊಳ್ಳೆ ಹೊಡೆಯುತ್ತಿರುವ ಮೊಬೈಲ್ ಕಂಪನಿಗಳು ತಮ್ಮ ನಿಲುವು ಬದಲಾಯಿಸಿ, ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ನೆಟ್ವರ್ಕ್ ನೀಡಲು ಮುಂದಾಗಬೇಕು ಎಂಬುದು ಗ್ರಾಹಕರ ಒತ್ತಾಯ.