ಮಂಗಳೂರು: ಕಳೆದ ಆರು ತಿಂಗಳಿನಿಂದ ಸರ್ಕಾರ ಶಿಕ್ಷಕರನ್ನು ಕಡೆಗಣಿಸಿ, ಸಂಕಷ್ಟಕ್ಕೊಳಪಡಿಸಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಶಿಕ್ಷಕರು ಕೂಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶಿಕ್ಷಕ ವರ್ಗವನ್ನು ನಿರ್ಲಕ್ಷಿಸಿ, ಭಾರತ ವಿಶ್ವಗುರು ಆಗಬೇಕು ಎಂದು ಬೊಬ್ಬೆ ಹಾಕಿದರೇ ಸಾಧ್ಯವಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಶಾಸಕ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಿಡಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಬಹಳಷ್ಟು ಶಿಕ್ಷಕರು ಹಲವಾರು ತಿಂಗಳಿನಿಂದ ವೇತನ ಇಲ್ಲದೇ ಮನೆಯಲ್ಲಿದ್ದಾರೆ. ಇನ್ನೂ ಕೆಲವರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಆದರೆ, ಅವರ ಪರವಾಗಿ ಸರ್ಕಾರ ಚಕಾರ ಎತ್ತಿಲ್ಲ. ಅವರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಹೇಳಿದರು.
ಈಗ ಆನ್ಲೈನ್ ಶಿಕ್ಷಣ ಪ್ರಾರಂಭವಾಗಿದೆ. ಎಲ್ಲ ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಶಾಲಾ ಶುಲ್ಕ ಪಡೆಯುತ್ತಿವೆ. ಆದರೆ, ಶಿಕ್ಷಕರಿಗೆ ಸಿಗುವ ವೇತನ ಇನ್ನೂ ದೊರಕಿಲ್ಲ. ಈ ಕುರಿತು ಸರ್ಕಾರ ಸಮಿತಿಯನ್ನು ರಚಿಸಿಲ್ಲ. ಅದಲ್ಲದೇ ಶಾಲೆಗಳು ಯಾವಾಗಿನಿಂದ ಆರಂಭವಾಗಲಿವಎ ಎಂಬ ಸ್ಪಷ್ಟ ರೂಪುರೇಷೆ ಸಿದ್ಧವಾಗಿಲ್ಲ. ಆದ್ದರಿಂದ ಶಿಕ್ಷಕರನ್ನು ಕಡೆಗಣಿಸಿರುವ ಸರ್ಕಾರ ನಡೆಯಿಂದಾಗಿ ಈ ಬಾರಿಯ ಸರ್ಕಾರಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಹೇಳಿದರು.
ಆನ್ಲೈನ್ ಶಿಕ್ಷಣದ ಬಗ್ಗೆ ಎಷ್ಟು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ರಾಜ್ಯದಲ್ಲಿ ಶೇ.55 ಜನರಿಗೆ ಆನ್ಲೈನ್ ಕಲಿಕೆಯ ವಿಧಾನದ ಬಗ್ಗೆ ಇನ್ನೂ ಸರಿಯಾದ ಅರಿವು ಇಲ್ಲ. ಪೊಲೀಸ್ ಇಲಾಖೆಯ ಸಿಬ್ಬಂದಿ, ವೈದ್ಯರುಗಳು ವಿದ್ಯಾರ್ಥಿಗಳಿಗೆ ಪಾಠ ಮಾಡುವುದನ್ನು ಮಾಧ್ಯಮದ ಮೂಲಕ ಜಗಜ್ಜಾಹಿರಾಗುತ್ತಿದೆ ಎಂದು ಹೇಳಿದರು.