ಮಂಗಳೂರು: ನಂಜನಗೂಡಿನಲ್ಲಿರುವ ಇತಿಹಾಸ ಪ್ರಸಿದ್ಧ ದೇವಸ್ಥಾನವನ್ನು ಕೆಡವಿ ಹಾಕಿರುವ ನೈತಿಕ ಹೊಣೆ ಹೊತ್ತು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರು ರಾಜಿನಾಮೆ ನೀಡಲಿ ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ರಾಜ್ಯದಲ್ಲಿ ಎರಡೂವರೆ ವರ್ಷದ ಆಡಳಿತದಲ್ಲಿ ತಮ್ಮ ಸಂಸ್ಕೃತಿಯನ್ನು ನಂಜನಗೂಡಿನಲ್ಲಿರುವ ಇತಿಹಾಸ ಪ್ರಸಿದ್ಧ ದೇವಸ್ಥಾನವನ್ನು ಕೆಡವಿ ಹಾಕುವ ಮೂಲಕ ತಿಳಿಸಿಕೊಟ್ಟಿದ್ದಾರೆ.
ಕೆಡವಿ ಹಾಕುವುದೇ ಬಿಜೆಪಿ ಸರಕಾರದ ಸಂಸ್ಕೃತಿ ಎಂಬುದು ಮತ್ತೆ ಬಿಂಬಿತವಾಗಿದೆ. ಜನರ ಭಾವನೆ, ಸಮಾಜವನ್ನು ಕೆಡವಿ ಹಾಕುತ್ತಿದ್ದ ಬಿಜೆಪಿ ಇದೀಗ ದೇವಸ್ಥಾನಗಳನ್ನು ಕೆಡವಿ ಹಾಕಲು ಹೊರಟಿದೆ. ಈ ಹಿಂದೆ ಪಠ್ಯದಲ್ಲಿ ಮಕ್ಕಳು ವಿದೇಶಿಯರು ಬಂದು ದೇಶದ ದೇವಾಲಯಗಳನ್ನು ಕೆಡವಿ ಹಾಕಿದ್ದರು ಎಂದು ಓದುತ್ತಿದ್ದರು. ಮುಂದಿನ ದಿನಗಳಲ್ಲಿ ಮಕ್ಕಳು ಬಿಜೆಪಿಗರು ದೇವಾಲಯಗಳನ್ನು ಒಡೆದು ಹಾಕಿದ್ದಾರೆ ಎಂದು ಓದಲಿದ್ದಾರೆ ಎಂದು ಟೀಕಿಸಿದರು.
ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಬಿಜೆಪಿ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ಮತ್ತೆ ಯಾವ ರೀತಿಯ ಆಡಳಿತ ನೀಡಲು ಇವರಿಂದ ಸಾಧ್ಯ?. ಬಿಜೆಪಿಗರು ಬಾಲಿಶತನದ ಹೇಳಿಕೆ ನೀಡುತ್ತಿದ್ದು, ಜನರನ್ನು ಮತ್ತೆ ಮತ್ತೆ ಮೂರ್ಖರನ್ನಾಗಿಸುತ್ತಿದ್ದಾರೆ. ಇವರು ಧಾರ್ಮಿಕ ಕೇಂದ್ರಗಳನ್ನು ಕೆಡವಿದ್ದೇ ತಪ್ಪು. ಆ ಬಳಿಕ ಅವರು ಅದನ್ನು ಸುಪ್ರೀಂಕೋರ್ಟ್, ಅಧಿಕಾರಿಗಳ ಮೇಲೆ ಹಾಕುವುದು ಇನ್ನೊಂದು ತಪ್ಪು. ರಾಜ್ಯ ಸರಕಾರಕ್ಕೆ ಅಧಿಕಾರಿಗಳು ಮಾಡುವ ಆದೇಶ ಗೊತ್ತಿಲ್ಲವೆಂದಾದಲ್ಲಿ ಸರಕಾರ, ಜಿಲ್ಲಾ ಉಸ್ತವಾರಿ ಸಚಿವರು ಏತಕ್ಕೆ ಅಧಿಕಾರಿಗಳೇ ಆಡಳಿತ ನಡೆಸಲಿ ಎಂದರು.
ಸುಪ್ರೀಂಕೋರ್ಟ್‌ನ ಈ ಆದೇಶ 2009ರಲ್ಲಿ ಬಂದಿದ್ದು, ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವಾಗಲೂ, ಸಿದ್ದರಾಮಯ್ಯ ಸಿಎಂ ಇದ್ದಾಗಲೂ ಆದೇಶ ಇತ್ತು. ಆದರೆ ರಾಜ್ಯದ ಯಾವುದೇ ಧಾರ್ಮಿಕ ಕೇಂದ್ರಗಳಿಗೆ ತೊಂದರೆಯಾಗದ ರೀತಿಯಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ನಿಭಾಯಿಸಿ ಆಡಳಿತ ನಡೆಸಿದೆ. ಬಿಜೆಪಿ ಸರಕಾರ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಜಾಗಗಳನ್ನು ಸಕ್ರಮ ಮಾಡಿಕೊಡುತ್ತಿದೆ. ಅದೇ ರೀತಿ ಅಕ್ರಮವಾಗಿರುವ ಧಾರ್ಮಿಕ ಕೇಂದ್ರಗಳನ್ನು ಪಟ್ಟಿ ಮಾಡಿ ಸಕ್ರಮ ಮಾಡಿಸಲು ಅವರಿಗೇನು ತೊಂದರೆ ಎಂದು ಖಾದರ್ ಹೇಳಿದರು.