ಮಂಗಳೂರು: ಶಿವಮೊಗ್ಗ ಕಲ್ಲು ಕ್ವಾರಿ ಸ್ಫೋಟ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಶಿವಮೊಗ್ಗವು ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆ. ಸಚಿವ ಈಶ್ವರಪ್ಪನವರು ಚುನಾಯಿತರಾಗಿರುವ ಜಿಲ್ಲೆ. ಈ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಸ್ಫೋಟಕಗಳು ಲಾರಿಯಲ್ಲಿ ಸಾಗಾಟ ಆಗಬೇಕಾದರೆ ಅಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲವೇ? ಇದನ್ನು ಯಾಕೆ ಸರ್ಕಾರ ತನಿಖೆ ಮಾಡುತ್ತಿಲ್ಲ? ಎಂದು ಶಾಸಕ ಯು.ಟಿ. ಖಾದರ್ ಪ್ರಶ್ನಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇರುವಲ್ಲಿ ಯಾಕೆ ಸರಿಯಾದ ಮಾಹಿತಿ ಬರುವುದಿಲ್ಲ. ಕಾಶ್ಮೀರದಲ್ಲಿ 200ಕೆಜಿ ಆರ್ಡಿಎಕ್ಸ್ ಲಾರಿಯಲ್ಲಿ ಗಡಿಯಿಂದ 300 ಕಿ.ಮೀ. ದೂರಕ್ಕೆ ಪುಲ್ವಾಮ ತನಕ ಬರುತ್ತದೆ. ಅದು ಬಿಜೆಪಿಯವರಿಗೆ ಗೊತ್ತಾಗುವುದಿಲ್ಲ. ಶಿವಮೊಗ್ಗದಲ್ಲಿ ಲಾರಿಗಟ್ಟಲೆ ಸ್ಫೋಟಕ ಬರುವಾಗಲೂ ಇವರಿಗೆ ಗೊತ್ತೇ ಇಲ್ಲವೇ ಎಂದರು.
ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ, ಚೆಕ್ ಪೋಸ್ಟ್ಗಳು ಇಲ್ಲವೇ? ಗಣಿಗಾರಿಕಾ ಸಚಿವರು ಗಣಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕಿತ್ತು. ಚೆಕ್ ಪೋಸ್ಟ್ ನವರ ಮೇಲೆಯೂ ಕ್ರಮವಹಿಸಬೇಕಿತ್ತು. ಆದರೆ ಯಾರ ಮೇಲೆಯೂ ಈವರೆಗೆ ಕ್ರಮಕೈಗೊಳ್ಳಲಾಗಲಿಲ್ಲ. ರಾಜ್ಯ ಗಣಿ ಇಲಾಖೆ ಸಚಿವರು ರಾಜಿನಾಮೆ ನೀಡಬೇಕೆಂದು ಯು.ಟಿ. ಖಾದರ್ ಆಗ್ರಹಿಸಿದರು.
ಈ ಸ್ಫೋಟದಿಂದ 60 ಹಳ್ಳಿಗಳಿಗೆ, 2-3 ಜಿಲ್ಲೆಗಳಿಗೆ ಭೂಕಂಪದ ರೀತಿಯಲ್ಲಿ ತೊಂದರೆಯಾಗಿರುವ ಈ ಸಂದರ್ಭದಲ್ಲಿ ಎಷ್ಟು ಜನಸಾಮಾನ್ಯರ ಸ್ವತ್ತುಗಳಿಗೆ ಹಾನಿಯಾಗಿರಬಹುದು. ಅಲ್ಲದೆ 60 ಕಿ.ಮೀ. ವ್ಯಾಪ್ತಿಯಲ್ಲಿ ಈ ಸ್ಫೋಟ ಪರಿಣಾಮ ಬೀರಿದೆ ಎಂದು ಹೇಳಿದರು.
ಇದನ್ನೂ ಓದಿ: ದೇಶದ ಆಂತರಿಕ ವಿಚಾರ ಬಹಿರಂಗಗೊಳಿಸಿದವರ ಬಗ್ಗೆ ಪ್ರಧಾನಿ ತನಿಖೆಗೊಳಪಡಿಸಲಿ: ಪ್ರಕಾಶ್ ರಾಥೋಡ್
ಆದ್ದರಿಂದ ಎಲ್ಲಾ ವ್ಯಾಪ್ತಿಯಲ್ಲಿ ಸಮರ್ಪಕ ತನಿಖೆ ನಡೆಸಿ, ಯಾವುದೇ ತೊಂದರೆ ಇಲ್ಲ ಎಂಬ ವರದಿಯನ್ನು ಗಣಿ ಇಲಾಖೆಯಿಂದ ತರಿಸುವುದು ಸರ್ಕಾರದ ಜವಾಬ್ದಾರಿ. ಅಲ್ಲದೆ ವಿಶೇಷ ಐಎಎಸ್ ಅಧಿಕಾರಿ ನೇಮಕ ಮಾಡಿ ಹಾನಿಯಾದವರಿಗೆ ತಕ್ಷಣ ಸೂಕ್ತ ಪರಿಹಾರ ನೀಡಲಿ. ಈ ಬಗ್ಗೆ ಸಂಪೂರ್ಣ ತನಿಖೆಯಾಗಿ ಸಂಚಾರ ಮತ್ತಿತರ ವಿಚಾರದಲ್ಲಿ ಎಲ್ಲವೂ ಸುರಕ್ಷಿತವಾಗಿದೆ ಎಂಬ ವರದಿ ಪಡೆಯಲಿ. ಜೊತೆಗೆ ಮಳೆಗಾಲದ ಸಂದರ್ಭದಲ್ಲಿ ಇದರಿಂದಾಗಿ ಪರಿಸ್ಥಿತಿ ಬಿಗಡಾಯಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು ಎಂದು ಯು.ಟಿ. ಖಾದರ್ ಆಗ್ರಹಿಸಿದರು.