ಪುತ್ತೂರು : ಸಾಕ್ಷರತಾ ಅಭಿಯಾನ ಆರಂಭಿಸಿ ಸುಮಾರು 30 ವರ್ಷ ಕಳೆದಿದೆ. ಆದರೆ, ಪುತ್ತೂರಿನಲ್ಲಿ ಇನ್ನೂ ಕೂಡ ಶೇ.11ಮಂದಿ ಅನಕ್ಷಸ್ಥರಿದ್ದಾರೆ ಎಂದಾಗ ನಾವೆಲ್ಲಿದ್ದೇವೆ ಎಂಬ ಚಿಂತನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪುತ್ತೂರನ್ನು ನೂರಕ್ಕೆ ನೂರು ಸಾಕ್ಷರವನ್ನಾಗಿಸುವ ಸವಾಲನ್ನು ನಾವೆಲ್ಲ ಸ್ವೀಕಾರ ಮಾಡಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಲೋಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ದ.ಕ.ಜಿಲ್ಲಾ ಪಂಚಾಯತ್, ಜಿಲ್ಲಾ ಸಾಕ್ಷರತಾ ಸಮಿತಿ ಮಂಗಳೂರು, ತಾಪಂ ಪುತ್ತೂರು, ಜನಶಿಕ್ಷಣ ಟ್ರಸ್ಟ್, ನವಸಾಕ್ಷರರ ಗ್ರಾಮ ವಿಕಾಸ ಕೇಂದ್ರಗಳ ಸಹಭಾಗಿತ್ವ ಲೋಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ದ.ಕ.ಜಿಲ್ಲಾ ಪಂಚಾಯತ್, ಜಿಲ್ಲಾ ಸಾಕ್ಷರತಾ ಸಮಿತಿ ಮಂಗಳೂರು, ತಾಪಂ ಪುತ್ತೂರು, ಜನಶಿಕ್ಷಣ ಟ್ರಸ್ಟ್, ನವಸಾಕ್ಷರರ ಗ್ರಾಮ ವಿಕಾಸ ಕೇಂದ್ರಗಳ ಸಹಭಾಗಿತ್ವದಲ್ಲಿ ಪುತ್ತೂರು ತಾಪಂ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ವಿಶ್ವ ಸಾಕ್ಷರತಾ ದಿನಾಚರಣೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಸಾಕ್ಷರತೆಯ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಇವತ್ತಿನ ಸಮಾಜದಲ್ಲಿ ಅಕ್ಷರಾಭ್ಯಾಸದ ಜತೆ ಡಿಜಿಟಲ್ ಸಾಕ್ಷರತೆ ಮುಖ್ಯ. ಆದರೆ, ಚಂದ್ರಲೋಕ, ಮಂಗಳಯಾನ ಮಾಡಿದ ನಮಗೆ ನನ್ನ ಮನೆಯ ಪಕ್ಕದಲ್ಲಿರುವವರಿಗೆ ಶಿಕ್ಷಣ ಕೊಡಲು ಆಗುವುದಿಲ್ಲ ಎಂದಾದರೆ ಇದೊಂದು ನಾಗರಿಕ ಸಮಾಜದ ಮೇಲಿರುವ ಪ್ರಶ್ನೆ ಎಂದ ಅವರು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ತುಳಿತಕ್ಕೊಳಗಾದವರೇ ಶೇಕಡವಾರು ಹೆಚ್ಚು ಅನಕ್ಷರಸ್ಥರಿದ್ದಾರೆ. ಇವರಿಗೆ ಅಕ್ಷರಭ್ಯಾಸ, ಸಾಮಾಜಿಕ ಜ್ಞಾನ, ಈಗಿನ ಡಿಜಿಟಲ್ ಸಾಕ್ಷರತೆ ಕೊಡಬಹದೋ ಎಂದು ಚಿಂತಿಸಿ ಈ ಕುರಿತು ನಾವು ಪ್ರಾಯೋಗಿಕವಾಗಿ ತಾ.ಪಂ, ಜಿ.ಪಂ, ಶಾಸಕರು ಎಲ್ಲರು ಪ್ರಯತ್ನಪಟ್ಟರೆ, ನಾವು ಒಂದೊಂದೇ ಗ್ರಾಮವನ್ನು ನೂರಕ್ಕೆ ನೂರು ಸಾಕ್ಷರ ಗ್ರಾಮವನ್ನಾಗಿ ಮಾಡಬಹುದು.
ಗ್ರಾಮವನ್ನು ಸಾಕ್ಷರ ಗ್ರಾಮ ಮಾಡದೆ ತಾಲೂಕು,ಜಿಲ್ಲೆಯನ್ನು ಸಾಕ್ಷರ ಮಾಡಲು ಸಾಧ್ಯವಿಲ್ಲ. ಅದಕ್ಕೆ ಬೇಕಾಗಿ ಪುತ್ತೂರು ತಾಲೂಕನ್ನು ನೂರಕ್ಕೆ ನೂರು ಸಾಕ್ಷರವನ್ನಾಗಿಸುವ ಸವಾಲನ್ನು ಸ್ವೀಕಾರ ಮಾಡೋಣ ಎಂದರು. ಯಾವಾಗ ಅನಕ್ಷರತೆಯನ್ನು ಹೋಗಲಾಡಿಸುತ್ತೇವೆಯೋ ಆಗ ಸಮಾಜದಲ್ಲಿರುವ ಎಲ್ಲ ಜನರು ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಲು ಮತ್ತು ಸರ್ಕಾರದ ಯೋಜನೆಗಳು ನೂರಕ್ಕೆ ನೂರು ಫಲಪ್ರದವಾಗಿ ವ್ಯಕ್ತಿಗೆ ಮುಟ್ಟಲು ಸಾಧ್ಯ ಎಂದರು.
ಸರ್ಕಾರದ ಯೋಜನೆ ಪಡೆಯಲು ಶಿಕ್ಷಣದ ಅಗತ್ಯತೆ : ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮೃದ್ಧ ಭಾರತ ದೇಶದ ಬುದ್ಧಿವಂತರ ಜಿಲ್ಲೆಯಲ್ಲಿ ಇವತ್ತು ಕೂಡ ಅನಕ್ಷರಸ್ಥರಿದ್ದಾರೆ ಎಂದರೆ ಆಶ್ಚರ್ಯ ಪಡಬೇಕಾಗಿದೆ. ಸರ್ಕಾರದಿಂದ ಎಷ್ಟೋ ಯೋಜನೆಗಳು ಬರುತ್ತಿದ್ದರೂ ತಳಮಟ್ಟದ ಜನರಿಗೆ ತಲುಪಲು ಶಿಕ್ಷಣದ ಅಗತ್ಯದ ಇದೆ. ಶಿಕ್ಷಣದಿಂದ ಯಾರೂ ಕೂಡ ವಂಚಿತರಾಗಬಾರದು. ಸರ್ಕಾರದ ಯೋಜನೆ ಮುಟ್ಟುವಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದರು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಬೋರ್ಕರ್, ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಂತಿಗೌಡ, ಜಿಪಂ ಸದಸ್ಯೆ ಆಶಾ ತಿಮ್ಮಪ್ಪಗೌಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು.