ಮಂಗಳೂರು: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪ್ರಾಮಾಣಿಕರು. ಜಿಲ್ಲೆಯ ಅಭಿವೃದ್ಧಿಗೆ ದುಡಿದಿದ್ದಾರೆ. ಆದರೆ ಅವರ ಮಾನಸಿಕತೆ ಏನು ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಓರ್ವ ಸರ್ಕಾರಿ ಅಧಿಕಾರಿಗೆ ತನ್ನದೇ ಇತಿಮಿತಿ ಇದೆ. ಆದ್ದರಿಂದ ಅವರು ಕೇಂದ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡಿ ದೇಶ ವಿರೋಧಿಯಾಗಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ವಾಗ್ದಾಳಿ ನಡೆಸಿದ್ದಾರೆ.
ನಗರದ ಕೊಡಿಯಾಲ್ ಬೈಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಂಥಿಲ್ರ ಗೋಮುಖದ ಪರಿಚಯ ಇತ್ತು. ಸಂಸದರು ಮತ್ತು ಶಾಸಕರು ಸೇರಿ ಅವರನ್ನು ಇಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೆವು. ಅವರು ಏಕಾಏಕಿ ರಾಜೀನಾಮೆ ನೀಡಿದಾಗ ಅವರ ಮನಸ್ಸಿನಲ್ಲಿರುವ ವ್ಯಾಘ್ರಮುಖ ಕಂಡು ಆಶ್ಚರ್ಯವಾಯಿತು ಎಂದು ಸೆಂಥಿಲ್ ನಡೆಯನ್ನು ಖಂಡಿಸಿದರು.
'ಸಿಂಗಂ' ಅಣ್ಣಾಮಲೈ ಬೆನ್ನಲ್ಲೇ ಮತ್ತೊಬ್ಬ ದಕ್ಷ ಅಧಿಕಾರಿ ಡಿಸಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ
ದೇಶದಲ್ಲಿ ಮೋದಿ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಅದರ ಬಗ್ಗೆ ಅವರು ತಪ್ಪು ತಿಳಿದುಕೊಂಡಿದ್ದಾರೆ. ಆದರೆ ಈ ದೇಶದ ಪ್ರಜಾಪ್ರಭುತ್ವಕ್ಕೆ ಹೊಡೆತ ಬಿದ್ದಿದೆ ಎಂದು ಏಕಾಏಕಿ ಯಾಕೆ ಆ ಮಾತನ್ನು ಹೇಳಿದರು ಅನ್ನೋದು ಗೊತ್ತಾಗುತ್ತಿಲ್ಲ. ಅವರಿಗೆ ಎಡಪಂಥೀಯ ಚಿಂತನೆಯ ಬಗ್ಗೆ ಒಲವಿರಬಹುದು. 370 ವಿಧಿ ರದ್ದು, ರಾಮ ಮಂದಿರ ಜನಸಾಮಾನ್ಯರ ಭಾವನೆಗೆ ಸಂಬಂಧಪಟ್ಟ ವಿಷಯ. ಇವುಗಳ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಓರ್ವ ಜಿಲ್ಲಾಧಿಕಾರಿ ರಾಜೀನಾಮೆ ನೀಡಿರುವುದು ಹೇಡಿತನ ಎಂದು ಮಠಂದೂರು ಟೀಕಿಸಿದರು.
ಸ್ವತಃ ಜಿಲ್ಲಾಧಿಕಾರಿಯೇ ಜಿಲ್ಲೆಯ ಸಂಸದರು, ಶಾಸಕರಿಂದ ನನಗೇನು ಸಮಸ್ಯೆಯಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಬೇರೇನು ಬಂಡವಾಳ ಇಲ್ಲ. ಅದಕ್ಕೆ ಜಿಲ್ಲಾಧಿಕಾರಿಯವರ ರಾಜೀನಾಮೆಯನ್ನು ಕಾಂಗ್ರೆಸ್ನವರು ಬಂಡವಾಳ ಮಾಡಿಕೊಂಡಿದ್ದಾರೆ. ಆ ಮುಖಾಂತರ ಅದನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ಶಾಸಕ ಮಠಂದೂರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಡಿಕೆಶಿ ಬಂಧನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಇಡಿ, ಐಟಿ ತಮ್ಮದೇಯಾದ ಕಾನೂನಿನಡಿಯಲ್ಲಿ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ನವರಿಗೆ ನಮ್ಮ ಬಗ್ಗೆ ಮಾತನಾಡಲು ಬೇರೆ ವಿಚಾರವಿಲ್ಲ. ಅದಕ್ಕೇ ಈಗ ಮನಸ್ಸಿಗೆ ಬಂದಹಾಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಡಿಕೆಶಿ ಸಾಚಾ ಆದರೆ ಕಾನೂನಿನ ಅಡಿಯಲ್ಲಿ ಬಹಳಷ್ಟು ಅವಕಾಶಗಳಿದ್ದು, ಜಾಮೀನು ಪಡೆದು ಹೊರಬರಲಿ ಎಂದು ಸಂಜೀವ ಮಠಂದೂರು ಹೇಳಿದ್ರು.