ಮಂಗಳೂರು: ರಾಜ್ಯ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಬಗ್ಗೆ ಘೋಷಣೆ ಮಾಡಿದೆ. ಆದ್ದರಿಂದ ತಕ್ಷಣ ದ.ಕ ಜಿಲ್ಲಾಡಳಿತ ಗ್ರಾಮೀಣ ಮಟ್ಟ, ಹೋಬಳಿ ಮಟ್ಟದಲ್ಲಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಸಭೆ ನಡೆಸಬೇಕು ಎಂದು ಶಾಸಕ ಖಾದರ್ ಸಲಹೆ ನೀಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಿಂದ ವಿದ್ಯಾರ್ಥಿಗಳನ್ನು ಪರೀಕ್ಷಾ ಸೆಂಟರ್ಗೆ ಬರುವ ಬಗ್ಗೆ, ಬಸ್ ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಯಾವ ರೀತಿ ಮಾಡಬೇಕು. ಕೋವಿಡ್ ಮುಂಜಾಗ್ರತಾ ಕ್ರಮಗಳ ಬಗ್ಗೆ ತಕ್ಷಣ ಸಭೆ ನಡೆಸಿ ಶಿಕ್ಷಣ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯೂ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಳೆದ 20 ದಿನಗಳ ಹಿಂದೆ ಚಂಡಮಾರುತ ಬಂದಿದ್ದು, ಕರಾವಳಿ ತೀರದ ತಲಪಾಡಿಯಿಂದ ಕುಂದಾಪುರದವರೆಗೆ ಬಹಳಷ್ಟು ಮನೆಗಳು, ಆಸ್ತಿಪಾಸ್ತಿಗಳ ನಾಶ, ನಷ್ಟ ಉಂಟಾಗಿದೆ. ಇನ್ನೂ ಅವರಿಗೆ ಯಾವುದೇ ಪರಿಹಾರ ನೀಡಲಾಗಿಲ್ಲ. ಮನೆಗಳು ಹಾನಿಯಾಗಿದ್ದು, ಕೆಲವರು ಬೇರೆ ಯಾರದ್ದೋ ಮನೆಯಲ್ಲಿದ್ದಾರೆ. ಇನ್ನೂ ಕೆಲವರು ಬಾಡಿಗೆ ಮನೆಯಲ್ಲಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಹಾಗಾದರೆ ಮಳೆಹಾನಿ ಪರಿಹಾರ ಬಿಡುಗಡೆ ಮಾಡಲು ಇನ್ನೆಷ್ಟು ದಿನ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಸಭೆ ನಡೆದಾಗ ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆಯುತ್ತೇವೆ ಎಂದು ಹೇಳಿದ್ದರು. ಸಂರಕ್ಷಣಾ ಕಾಮಗಾರಿಗಳಿಗೆ ಆದೇಶ ಎಂದು ಮಂತ್ರಿಗಳು ಹೇಳಿದ್ದಾರೆ. ಆದರೆ ಒಂದೇ ಒಂದು ಕೆಲಸ ಆಗಿಲ್ಲ. ಭಯದ ವಾತಾವರಣದಲ್ಲಿಯೇ ಅಲ್ಲಿನ ಜನರು ಬದುಕುತ್ತಿದ್ದಾರೆ. ಜುಲೈ-ಆಗಸ್ಟ್ನಲ್ಲಿ ವಿಪರೀತ ಮಳೆ ಸುರಿದು ಮತ್ತೆ ಹಾನಿಯಾದಲ್ಲಿ ಅದಕ್ಕೆ ಸರ್ಕಾರವೇ ಜವಾಬ್ದಾರಿ. ಆದ್ದರಿಂದ ತಕ್ಷಣ ಈ ಬಗ್ಗೆ ಕಾಮಗಾರಿ ನಡೆಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಸಚಿವರಿಗೆ ಒತ್ತಾಯ ಮಾಡುತ್ತೇನೆ ಎಂದು ಖಾದರ್ ಹೇಳಿದರು.
ಕೊರೊನಾ ಸೋಂಕು ನಿರ್ವಹಿಸುವಲ್ಲಿ ಸರ್ಕಾರ ವಿಫಲ:
ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೊರೊನಾ ಸೋಂಕು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ದೇಶವನ್ನು ಸಾಮೂಹಿಕ ಪಿಂಡ ಪ್ರದಾನ ಮಾಡುವಲ್ಲಿಗೆ ಕೊಂಡೊಯ್ಯುತ್ತಿದೆ ಎಂದು ದ.ಕ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ಸಂಘಟನಾ ಸಂಚಾಲಕ ಶುಭೋದಯ ಆಳ್ವ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಬಿಜೆಪಿಗರು 'ಆತ್ಮ ನಿರ್ಭರ' ಎನ್ನುತ್ತಿದ್ದರೂ ಜನರ ಆತ್ಮ ಮಾತ್ರ ಬರ್ಬರವಾಗುತ್ತಿದೆ. ಈ ಬಗ್ಗೆ ಯಾಕೆ ಜನರಿಗೆ ಜನಪ್ರತಿನಿಧಿಗಳು ಉತ್ತರಿಸುತ್ತಿಲ್ಲ ಎಂದು ಹೇಳಿದರು.
ಈ ಬಾರಿ 500 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಆದರೆ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ರೂ. ಪ್ಯಾಕೇಜ್ ಎಲ್ಲಿಗೆ ಸಾಕಾಗುತ್ತದೆ. ಕನಿಷ್ಠ ಅವರಿಗೆ 10 ಸಾವಿರ ರೂ. ಆದರೂ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು. ಈ ರೀತಿ ಮಾಡಿದಲ್ಲಿ ಜನರು ನಿಮ್ಮನ್ನು ಕ್ಷಮಿಸಲ್ಲ ಎಂದು ಹೇಳಿದರು.
ದ.ಕ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರು ಉತ್ತರ ಕುಮಾರರಂತೆ ಮಾತನಾಡುತ್ತಿದ್ದಾರೆಯೇ ವಿನಾ ಕಾರ್ಯದಲ್ಲಿ ಏನೂ ಇಲ್ಲ. ಜನರು ನಿಮ್ಮನ್ನು ಮತ ನೀಡಿ ಗೆಲ್ಲಿಸಿದ್ದಾರೆ. ನಿಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನರೇ ನಿಮಗೆ ಪಾಠ ಕಲಿಸಲಿದ್ದಾರೆ ಎಂದು ಶುಭೋದಯ ಆಳ್ವ ಎಚ್ಚರಿಕೆ ನೀಡಿದರು.
ಕೊರೊನಾ ಹರಡಲು 'ನಮಸ್ತೆ ಟ್ರಂಪ್' ಕಾರಣ: ಡಾ. ಶೇಖರ್ ಪೂಜಾರಿ
ಬಿಜೆಪಿ ತಮ್ಮ ನಿಷ್ಕ್ರಿಯತೆ, ವೈಫಲ್ಯತೆಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ನತ್ತ ಬೊಟ್ಟು ಮಾಡುತ್ತಿದೆ ಎಂದು ದ.ಕ ಜಿಲ್ಲಾ ಡಾಕ್ಟರ್ ಸೆಲ್ ಅಧ್ಯಕ್ಷ ಡಾ. ಶೇಖರ್ ಪೂಜಾರಿ ತಿರುಗೇಟು ನೀಡಿದರು.