ಬೆಳ್ತಂಗಡಿ: ಲಾಕ್ ಡೌನ್ ಕಾರಣದಿಂದ ರಬ್ಬರ್ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ರಬ್ಬರ್ ಖರೀದಿಸಲು ಬೆಳ್ತಂಗಡಿ ರಬ್ಬರ್ ಸೊಸೈಟಿಗೆ ಅನುಮತಿ ನೀಡಲಾಗಿದ್ದು, ಏಪ್ರಿಲ್ 9 ರಿಂದ ರಬ್ಬರ್ ಖರೀದಿಸಲಾಗುತ್ತದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ಸಹಕಾರದೊಂದಿಗೆ ಗುರುವಾಯನಕೆರೆ ಹಾಗೂ ಉಜಿರೆ ಖರೀದಿ ಕೇಂದ್ರಗಳಲ್ಲಿ ಪ್ರತಿ ದಿನ 50 ಬೆಳೆಗಾರರಿಂದ ತಲಾ 100 ಕೆಜಿ ರಬ್ಬರ್ ಖರೀದಿಸಲು ಅನುಮತಿ ನೀಡಲಾಗಿದೆ. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಮುನ್ನೆಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಬ್ಬರ್ ಸೊಸೈಟಿಯ ಸದಸ್ಯರ ಬೇಡಿಕೆಯನ್ನು ಅನುಸರಿಸಿ ಸಂಘದ ಆಡಳಿತ ಮಂಡಳಿ, ಸಣ್ಣ ಪ್ರಮಾಣದಲ್ಲಿ ಸಂಘದ ಮುಖ್ಯ ಕಚೇರಿ ಹಾಗೂ ಗುರುವಾಯನಕೆರೆ ಶಾಖೆಯಲ್ಲಿ ಷರತ್ತುಗಳನ್ವಯ ರಬ್ಬರು ಖರೀದಿಸಲಾಗುವುದು. ಒಬ್ಬ ಸದಸ್ಯರಿಂದ ಗರಿಷ್ಟ 100 ಕೆಜಿ ಮೀರದಂತೆ ಖರೀದಿಸುವುದು. ಸದಸ್ಯರು ಹಿಂದಿನ ದಿನ ಸಂಘವನ್ನು ಸಂಪರ್ಕಿಸಿ(08256-236183/236783) ಟೋಕನ್ ನಂಬರ್ ಪಡೆದು ಮರುದಿನ ರಬ್ಬರ್ ತರುವುದು. ಪ್ರತಿ ದಿನ ಸಂಘದ ಮುಖ್ಯ ಕಚೇರಿಯಲ್ಲಿ 30 ಸದಸ್ಯರಿಂದ ಮತ್ತು ಶಾಖಾ ಕಚೇರಿಯಲ್ಲಿ 20 ಸದಸ್ಯರಿಂದ ಮಾತ್ರ ಖರೀದಿಗೆ ಅವಕಾಶ ನೀಡುವುದು ಎಂದು ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಜಿ. ಭೀಡೆ ತಿಳಿಸಿದ್ದಾರೆ.