ಬೆಳ್ತಂಗಡಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಾರಿಯರ್ಗಳಾಗಿ ದುಡಿಯುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗೆ ಶಾಸಕ ಹರೀಶ್ ಪೂಂಜಾ ಪ್ರೋತ್ಸಾಹಧನ ನೀಡಿದರು. ಬೆಳ್ತಂಗಡಿ ನಿರೀಕ್ಷಣಾ ಮಂದಿರದ ಆವರಣದಲ್ಲಿ ತಾಲೂಕಿನ 61 ಮಂದಿ ಗೃಹರಕ್ಷಕ ದಳದ ಸಿಬ್ಬಂದಿಗೆ ಅವರ ಸೇವೆ ಗುರುತಿಸಿ ತಲಾ ಒಬ್ಬರಿಗೆ 2 ಸಾವಿರದಂತೆ 1.22 ಲಕ್ಷ ರೂಪಾಯಿ ನೆರವು ನೀಡಿದರು.
ಗೃಹರಕ್ಷಕ ದಳದ ಸಿಬ್ಬಂದಿ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದು, ಅವರ ಪ್ರಯಾಣ ವೆಚ್ಚಕ್ಕೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಈ ಪ್ರೋತ್ಸಾಹಧನವನ್ನು ವಿತರಿಸಲಾಗುತ್ತಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಅವರ ಸೇವೆ ಅತ್ಯಮೂಲ್ಯವಾದದ್ದು. ಯಾವುದೇ ಪ್ರತಿಫಲದ ಆಪೇಕ್ಷೆ ಇಲ್ಲದೇ ದುಡಿಯುತ್ತಿರುವ ಅವರ ಸೇವೆ ಶ್ಲಾಘನೀಯ ಎಂದು ಶಾಸಕರು ಗೃಹರಕ್ಷಕ ದಳದ ಸಿಬ್ಬಂದಿಯ ಸೇವೆಯನ್ನು ಸ್ಮರಿಸಿದರು.