ಮಂಗಳೂರು : ರಾಷ್ಟ್ರದ ಗಮನಸೆಳೆದ ಬೆಂಗಳೂರು ಕಂಬಳವನ್ನು ಆಯೋಜಿಸಿದವರಲ್ಲಿ ಪ್ರಮುಖರಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಜಾಗ ಸಿಕ್ಕರೆ ಮುಂದಿನ ವರ್ಷವೂ ಬೆಂಗಳೂರು ಕಂಬಳ ನಡೆಸುವುದಾಗಿ ತಿಳಿಸಿದರು.
ಬೆಂಗಳೂರು ಕಂಬಳದ ಯಶಸ್ವಿಯ ಬಳಿಕ ಮಂಗಳೂರಿನಲ್ಲಿ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಅವರು, ಬೆಂಗಳೂರು ಕಂಬಳ ಯಶಸ್ವಿಯಾಗಿ ನಡೆದಿದೆ. ನಾವು 6-7 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಲ್ಲಿದ್ದೆವು. ಆದರೆ, ನಮ್ಮ ನಿರೀಕ್ಷೆಗೂ ಮೀರಿ 13 ಲಕ್ಷ ಜನ ಖುದ್ದಾಗಿ ಬಂದು ಬೆಂಗಳೂರು ಕಂಬಳ ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಜನ ಬೆಂಗಳೂರು ಕಂಬಳ ವೀಕ್ಷಿಸಿದ್ದಾರೆ ಎಂದರು.
ಕಂಬಳದಲ್ಲಿ ಭಾಗವಹಿಸಿದ ಕೋಣಗಳಿಗೆ ಭಾಗವಹಿಸಿದ ಅಷ್ಟು ಜನಗಳಿಗೆ ಗೊಂದಲ ಆಗದಂತೆ ವ್ಯವಸ್ಥೆ ಮಾಡಲಾಗಿದೆ. 2-3 ಲಕ್ಷ ಜನ ಊಟ ಮಾಡಿದ್ದಾರೆ. ನಮ್ಮ ತಂಡದ ಟೀಮ್ ವರ್ಕ್ ಮತ್ತು ದೈವ ದೇವರುಗಳ ಅನುಗ್ರಹದಿಂದ ಇದು ಸಾಧ್ಯವಾಗಿದೆ. ಈ ಕಂಬಳದಿಂದ ಕರಾವಳಿ ಜನರ ಮೇಲಿನ ಪ್ರೀತಿ ಹೆಚ್ಚಿಸಿದೆ ಎಂದು ಹೇಳಿದರು.
ಬೆಂಗಳೂರು ಕಂಬಳದ ಬಳಿಕ ಹಂತಹಂತವಾಗಿ ಜನರು ನಿರೀಕ್ಷೆ ಹೆಚ್ಚಿಸಿದ್ದಾರೆ. ಮುಂಬಯಿಯಲ್ಲಿ ಮಾಡಲು ಹೇಳುತ್ತಿದ್ದಾರೆ. ಆದರೆ, ಅದು ಅಷ್ಟು ಸುಲಭವಲ್ಲ. ಎಲ್ಲ ತಯಾರಿ ನಡೆಸಬೇಕು. ಕೋಣ ಕರೆದುಕೊಂಡು ಹೋಗುವ ಜವಾಬ್ದಾರಿ ದೊಡ್ಡದಿದೆ. ಬೆಂಗಳೂರಿನಲ್ಲಿ ಮತ್ತೆ ಜಾಗ ಸಿಕ್ಕರೆ ಮುಂದಿನ ವರ್ಷವೂ ಬೆಂಗಳೂರು ಕಂಬಳ ಆಯೋಜಿಸಲಾಗುವುದು ಎಂದು ಹೇಳಿದರು.
ನಮ್ಮ ಬೆಂಗಳೂರು ಕಂಬಳಕ್ಕೆ ಉತ್ತಮ ಸ್ಪಂದನೆ : ಬೆಂಗಳೂರು ಕಂಬಳ ಸಮಿತಿಯು ಹಮ್ಮಿಕೊಂಡಿದ್ದ ನಮ್ಮ ಕಂಬಳ ಬೆಂಗಳೂರು ಕಂಬಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಮ್ಮ ಕರೆಯೋಲೆಗೆ ಓಗೊಟ್ಟು ಕಂಬಳದಲ್ಲಿ ಭಾಗವಹಿಸಿದ ಎಲ್ಲ ಕೋಣಗಳ ಮಾಲೀಕರಿಗೂ ಧನ್ಯವಾದ ಸಮರ್ಪಿಸುತ್ತೇನೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕೆ ಎಸ್ ಅಶೋಕ್ ಕುಮಾರ್ ರೈ (ನವೆಂಬರ್ 27-2023) ಹೇಳಿದ್ದರು.
ಕಂಬಳ ಸಂಪನ್ನಗೊಂಡಿರುವ ಹಿನ್ನೆಲೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ಕಂಬಳದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಖುಷಿ ಇದೆ. ಎಲ್ಲರ ಸಹಕಾರದಿಂದ ಈ ಕಂಬಳ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ಕಂಬಳ ನೋಡಲು ಬಂದವರ ಉತ್ಸಾಹ ಕಂಡು ಸಂತಸವಾಯಿತು. ಇತಿಹಾಸದಲ್ಲೇ ಮೊದಲ ಬಾರಿ ಕರಾವಳಿಯನ್ನು ಹೊರತುಪಡಿಸಿ ನಡೆದ ಅದ್ಧೂರಿ ಬೆಂಗಳೂರು ಕಂಬಳ ಸೋಮವಾರ ಮುಂಜಾನೆ 4 ಗಂಟೆವರೆಗೂ ಸ್ಪರ್ಧೆಗಳು ನಡೆದು, 2 ಗಂಟೆ ಸುಮಾರಿಗೆ ಸಂಪನ್ನಗೊಂಡಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ನಮ್ಮ ಬೆಂಗಳೂರು ಕಂಬಳಕ್ಕೆ ಉತ್ತಮ ಸ್ಪಂದನೆ: ಅಶೋಕ್ ಕುಮಾರ್ ರೈ