ಮಂಗಳೂರು (ದ.ಕ): ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಟೀಕಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಯಿಂದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ನಗರದಲ್ಲಿ ಸರಿಯಾದ ವ್ಯವಸ್ಥೆ ಮಾಡದೆ ಸಮಸ್ಯೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾರ್ ಸ್ಟ್ರೀಟ್ನಲ್ಲಿ 9 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆದು ಸುಸ್ಥಿತಿಯಲ್ಲಿದ್ದರೂ ಅದನ್ನು ಮತ್ತೆ ಸ್ಮಾರ್ಟ್ ಸಿಟಿಯಡಿ ಕಾಮಗಾರಿ ಮಾಡಲಾಗುತ್ತಿದೆ. ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಮಂಗಳೂರು ಸಂಪೂರ್ಣ ಬಂದ್ ಆದಂತಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಈ ಪ್ರದೇಶದಲ್ಲಿದ್ದು ತುರ್ತು ವೈದ್ಯಕೀಯ ಸೇವೆಗೂ ತೊಂದರೆಯಾಗಿದೆ. ಕೊರೊನಾ ಬಳಿಕ ವ್ಯಾಪಾರ ವಹಿವಾಟು ಚೇತರಿಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರದಿಂದ ವ್ಯಾಪಾರಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಜಿಲ್ಲಾಧಿಕಾರಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಜೆ.ಆರ್ ಲೋಬೋ, ಮಂಗಳೂರಿನ ಇಂದಿನ ಆಡಳಿತ ಅನುಭವ ಇಲ್ಲ ಅವರಿಗೆ ಎಂಬುದನ್ನು ತೋರಿಸುತ್ತದೆ. ಬಿಜೆಪಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದರು.