ಪುತ್ತೂರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ತಮ್ಮ ರಾಜಕೀಯ ಗುರು ಉರಿಮಜಲ್ ರಾಮ ಭಟ್ ಅವರ ಪುತ್ತೂರಿನ ನಿವಾಸಕ್ಕೆ ಇಂದು ತೆರಳಿ ಆಶೀರ್ವಾದ ಪಡೆದರು.
ಕೊಂಬೆಟ್ಟುವಿನಲ್ಲಿರುವ ಭಟ್ ನಿವಾಸಕ್ಕೆ ತೆರಳಿದ ಡಿವಿಎಸ್ ವಯೋವೃದ್ಧ ಗುರುವಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಶಿಷ್ಯನ ಜತೆ ಕೆಲ ಹೊತ್ತು ಕುಶಲೋಪರಿ ಮಾತನಾಡಿದ ಭಟ್, ಡಿವಿಎಸ್ಗೆ ಆಶೀರ್ವಾದ ಮಾಡಿದರು. ಕೆಲ ತಿಂಗಳುಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ರಾಮ ಭಟ್ ಅವರಿಗೆ ಫೋನ್ ಮಾಡಿ ಮಾತನಾಡಿದ್ದರು.
ರಾಮಭಟ್ ಹಾಗೂ ಡಿವಿಎಸ್ ಒಡನಾಟ
ಜನಸಂಘ ಸ್ಥಾಪನೆ ಕಾಲದಿಂದಲೂ ಸಂಘ ಸಿದ್ಧಾಂತಿಯಾಗಿದ್ದುಕೊಂಡು, 1956-57ರ ಚುನಾವಣೆಯಿಂದಲೇ ಪುತ್ತೂರಿನಲ್ಲಿ ಜನಸಂಘದಿಂದ ಸ್ಪರ್ಧಿಸುತ್ತಾ ಬಂದಿದ್ದು, ಎರಡು ಬಾರಿ ಪುತ್ತೂರಿನಲ್ಲಿ ಶಾಸಕರಾಗಿದ್ದ ರಾಮ ಭಟ್ ಅವರು, ಡಿ.ವಿ.ಸದಾನಂದಗೌಡರನ್ನು ಸುಳ್ಯದಿಂದ ಕರೆತಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಣದಿಂದ ಸ್ಪರ್ಧೆಗೆ ಇಳಿಸಿದ್ದರು.
1989ರ ಚುನಾವಣೆಯಲ್ಲಿ ಪರಾಜಯಗೊಂಡ ಡಿವಿಎಸ್, 1994 ಮತ್ತು 1999ರಲ್ಲಿ ಗೆದ್ದಿದ್ದರು. 2004ರಲ್ಲಿ ಮಂಗಳೂರು ಸಂಸದರಾಗಿ, ನಂತರ ಉಡುಪಿ ಸಂಸದರಾಗಿ, ಮುಖ್ಯಮಂತ್ರಿಯೂ ಆದರು.
ನಂತರ ಕರಾವಳಿಯನ್ನು ಬಿಟ್ಟು ರಾಜಧಾನಿ ಆರಿಸಿಕೊಂಡ ಡಿವಿಎಸ್, ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾದರು. 2008ರಲ್ಲಿ ಆಗಿನ ಬಿಜೆಪಿ ಶಾಸಕಿ ಶಕುಂತಲಾ ಶೆಟ್ಟಿಗೆ ಎರಡನೇ ಬಾರಿ ಟಿಕೆಟ್ ನಿರಾಕರಣೆ ಮಾಡಿದ ವಿಚಾರದಲ್ಲಿ, ಉರಿಮಜಲ್ ರಾಮ ಭಟ್ ಬಿಜೆಪಿ ನಾಯಕತ್ವದ ವಿರುದ್ಧ ಸಿಡಿದೆದ್ದು, ಸ್ವಾಭಿಮಾನಿ ವೇದಿಕೆ ರಚಿಸಿದ್ದರು.
ಇದೇ ವೇದಿಕೆ ಅಡಿಯಲ್ಲಿ ಶಕುಂತಳಾ ಶೆಟ್ಟಿ 2008ರಲ್ಲಿ ಪಕ್ಷೇರರರಾಗಿ ಪುತ್ತೂರಿನಿಂದ ಸ್ಪರ್ಧಿಸಿದ್ದರು. ರಾಮ ಭಟ್ ಕೂಡ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ಶಕುಂತಲಾ ಶೆಟ್ಟಿ 2013ರಲ್ಲಿ ಕಾಂಗ್ರೆಸ್ ಸೇರಿ ಗೆದ್ದು ಶಾಸಕರಾದ ಬಳಿಕ ಸುಮ್ಮನಾಗಿದ್ದ ರಾಮ ಭಟ್, ಆಂತರಿಕವಾಗಿ ಬಿಜೆಪಿ ನಾಯಕತ್ವದ ವಿರುದ್ಧ ಆಕ್ರೋಶವಿಟ್ಟುಕೊಂಡಿದ್ದರು.
ಕೆಲ ವರ್ಷಗಳಿಂದ ಬಿಜೆಪಿ ನಾಯಕತ್ವದ ಜತೆಗಿನ ಮುನಿಸು ಕಡಿಮೆ ಮಾಡಿಕೊಂಡಿದ್ದ ರಾಮ ಭಟ್ ಅವರನ್ನು ಕೆಲ ದಿನಗಳ ಹಿಂದಷ್ಟೇ ನೂತನ ಸಚಿವ ಅಂಗಾರ ಅವರೂ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು.
ಇದನ್ನೂ ಓದಿ: ಮಾವೋವಾದಿಗಳಿಗಿಂತ ಬಿಜೆಪಿ ಹೆಚ್ಚು ಅಪಾಯಕಾರಿ : ಮಮತಾ ಬ್ಯಾನರ್ಜಿ