ಮಂಗಳೂರು: 6ನೇ ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 5ನೇ ದಿನವೂ ಮುಂದುವರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಮಂಗಳೂರು ಮತ್ತು ಪುತ್ತೂರು ವಿಭಾಗದಿಂದ ಕಾರ್ಯಾಚರಣೆಯಾಗುತ್ತಿರುವ ಅನುಸೂಚಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಪ್ರತಿ ದಿನ ಸುಮಾರು 480 ಅನುಸೂಚಿ ವಾಹನಗಳು ಸಂಚಾರ ನಡೆಸುತ್ತಿದೆ. ಏ.10ರಂದು ಸುಮಾರು 140 ವಾಹನಗಳು ಬೆಂಗಳೂರು, ಮೈಸೂರು, ಧರ್ಮಸ್ಥಳ, ಹುಬ್ಬಳ್ಳಿ, ಕಾಸರಗೋಡು, ಹೈದರಾಬಾದ್, ಮಧುರೈ, ಕೊಯಮತ್ತೂರು, ಮಂತ್ರಾಲಯ ಮುಂತಾದ ಕಡೆಗೆ ಮಂಗಳೂರಿನಿಂದ ಸಂಚಾರ ನಡೆಸಿವೆ.
ಅದೇ ರೀತಿ, ಏ.11ರಂದು ಸುಮಾರು 200 ವಾಹನಗಳಲ್ಲಿ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಾಹನಗಳು ಕಾರ್ಯಾಚರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಮಂಗಳೂರು ವಿಭಾಗದಿಂದ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಪುತ್ತೂರು ವಿಭಾಗದಲ್ಲಿಯೂ ಸಹ ವಾಹನಗಳ ಕಾರ್ಯಾಚರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಏ10ರಂದು 47 ವಾಹನಗಳು ಹಾಗೂ ಏ.11ರಂದು ಸುಮಾರು 75 ವಾಹನಗಳು ಬೆಂಗಳೂರು, ಮೈಸೂರು, ಶಿವಮೊಗ್ಗ, ಪುತ್ತೂರು ಮಡಿಕೇರಿ ಮುಂತಾದ ಮಾರ್ಗಗಳಲ್ಲಿ ಸಂಚಾರ ನಡೆಸಿದೆ ಎಂದರು.
ಈಗಾಗಲೇ ಕರ್ತವ್ಯಕ್ಕೆ ಹಾಜರಾದ ನೌಕರರೆಲ್ಲರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇನ್ನುಳಿದ ನೌಕರರು ಕೂಡ ಕರ್ತವ್ಯಕ್ಕೆ ಹಾಜರಾಗಿ ಈ ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.