ಮಂಗಳೂರು: 2023ರಿಂದ ಬಳ್ಳಾರಿಯ ದೇವದಾರಿಯಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆಯನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಕೆಐಒಸಿಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ಸಾಮಿನಾಥನ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ದೇವದಾರಿಯಲ್ಲಿ ಗಣಿಗಾರಿಕೆ ನಡೆಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಮೊದಲ ಹಂತದ ಅನುಮೋದನೆ ಪಡೆಯಲಾಗಿದೆ. 2022ರ ಮಾರ್ಚ್ ವೇಳೆಗೆ 2ನೇ ಹಂತದ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಇದರ ಪ್ರಕ್ರಿಯೆ ಮುಗಿದ ಬಳಿಕ 2023ರಿಂದ ಕಬ್ಬಿಣ ಮತ್ತು ಮ್ಯಾಂಗನೀಸ್ ಗಣಿಗಾರಿಕೆಯನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ದೇವದಾರಿಯಲ್ಲಿ 2 ಎಂಟಿಪಿಎ ಕಬ್ಬಿಣದ ಅದಿರು ಮತ್ತು 500 ಟಿಪಿಎ ಮ್ಯಾಂಗನೀಸ್ ಅದಿರು ಸಾಮರ್ಥ್ಯ ಇದೆ ಎಂದರು.
ದೇಶದ ವಿವಿಧೆಡೆ ವಿವಿಧ ಹಂತಗಳಲ್ಲಿ ಖನಿಜ ಪರಿಶೋಧನೆ ಕಾರ್ಯಗಳು ನಡೆಯುತ್ತಿವೆ. ಕೆಐಒಸಿಎಲ್ ಇಂತಹ 4 ಬ್ಲಾಕ್ಗಳಿಗೆ ಜಿ4 ಮಟ್ಟದ ಖನಿಜ ಪರಿಶೋಧನ ಕಾರ್ಯ ಪೂರ್ಣಗೊಳಿಸಿ ಅದರ ವರದಿಯನ್ನು ರಾಷ್ಟ್ರೀಯ ಖನಿಜ ಪರಿಶೋಧನ ಟ್ರಸ್ಟ್ಗೆ ನೀಡಿದೆ ಎಂದರು.
ಕೆಐಒಸಿಎಲ್ (ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ) 2020-21ನೇ ಸಾಲಿನಲ್ಲಿ 410.23 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. 2021-22ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ತೆರಿಗೆ ಬಳಿಕ 215.82 ಕೋಟಿ ರೂ. ಲಾಭ ದಾಖಲಿಸಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಅ. 2ರಂದು ವಿಜಯನಗರ ಜಿಲ್ಲೆಗೆ ಸಿಎಂ ಅಧಿಕೃತ ಚಾಲನೆ: ಸಚಿವ ಆನಂದ್ ಸಿಂಗ್