ಮಂಗಳೂರು: ಪಶ್ಚಿಮ ಬಂಗಾಳಕ್ಕೆ ತೆರಳಬೇಕಿದ್ದ ರೈಲು ದಿಢೀರ್ ರದ್ದಾದ ಹಿನ್ನೆಲೆ ನೂರಾರು ವಲಸೆ ಕಾರ್ಮಿಕರು ನಗರದ ಹೊರವಲಯ ಜೋಕಟ್ಟೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗುರುವಾರ ಪಶ್ಚಿಮ ಬಂಗಾಳಕ್ಕೆ ತೆರಳಲು ರೈಲು ವ್ಯವಸ್ಥೆ ಇದೆ ಎಂದು ಬುಧವಾರ ರಾತ್ರಿ ಅಧಿಕಾರಿಗಳು ತಿಳಿಸಿದ್ದರು, ಹೀಗಾಗಿ ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಲು ಸಾಮಾನು ಸರಂಜಾಮುಗಳೊಂದಿಗೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಆದರೆ ಗುರುವಾರ ಬೆಳಗ್ಗೆ 9 ಗಂಟೆ ವೇಳೆಗೆ ದಿಢೀರ್ ರೈಲು ರದ್ದಾಗಿದೆ. ಪರಿಣಾಮ ವಲಸೆ ಕಾರ್ಮಿಕರು ಮತ್ತೆ ತಮ್ಮ ಬಾಡಿಗೆ ಮನೆಗೂ ತೆರಳಲಾಗದೆ, ಇತ್ತ ತವರಿಗೂ ತೆರಳಲಾಗದೆ ಅತಂತ್ರ ಸ್ಥಿತಿಗೆ ತಲುಪಿದ್ದಾರೆ.
ಜೋಕಟ್ಟೆ ಸಮೀಪ ರಸ್ತೆ ಬದಿ ಜಮಾಯಿಸಿದ್ದ ನೂರಾರು ವಲಸೆ ಕಾರ್ಮಿಕರಿಗೆ ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಅಬೂಬಕ್ಕರ್ ಬಾವಾ ಅವರ ಕಟ್ಟಡ ಹಾಗೂ ತೋಕೂರು ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.