ಮಂಗಳೂರು: ನಗರದ ಪೊಲೀಸ್ ಕಮಿಷನರ್ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಸಭೆಯನ್ನು ಇಂದು ಆಯೋಜಿಸಲಾಗಿತ್ತು. ಈ ವೇಳೆ, ನಾಗರಿಕರಿಂದ ಹಲವಾರು ದೂರುಗಳ ಸರಮಾಲೆಯೇ ಕೇಳಿ ಬಂತು. ಕಾವೂರು ಆಕಾಶಭವನಕ್ಕೆ ಆರು ಬಸ್ ಗಳಿವೆ. ಆದರೆ, ಸಂಜೆ ಏಳುವರೆ ಬಳಿಕ ಯಾವ ಬಸ್ ಗಳು ಬರುವುದಿಲ್ಲ. ಕೇಳಿದರೆ ಪ್ರಯಾಣಿಕರು ಇಲ್ಲ ಎನ್ನಲಾಗುತ್ತದೆ. ರಾತ್ರಿ ವೇಳೆ ಕೆಲಸದಿಂದ ಬರುವವರು ರಿಕ್ಷಾದಲ್ಲಿ ಮೂರು ನಾಲ್ಕು ಮಂದಿ 200 ರೂ. ಬಾಡಿಗೆ ಕೊಟ್ಟು ಬರಬೇಕು. ಇದನ್ನು ಸರಿಪಡಿಸಿ. ಹಿರಿಯ ನಾಗರಿಕರಿಗೆ ಬಸ್ ನಲ್ಲಿ ಸೀಟ್ ಬಿಡುವುದಿಲ್ಲ. ಬಸ್ನಲ್ಲಿ ಜಾಗವಿದ್ದರೂ ಫುಟ್ ಬೋರ್ಡ್ ನಲ್ಲಿ ನೇತಾಡುತ್ತಾರೆ ಎಂದು ಹಿರಿಯ ನಾಗರಿಕೆ ಚೂಡಾಮಣಿ ಎಂಬವರು ದೂರು ನೀಡಿದರು. ಈ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುತ್ತೇವೆ ಎಂದು ಕಮಿಷನರ್ ಅನುಪಮ್ ಅಗರ್ ವಾಲ್ ಭರವಸೆ ನೀಡಿದರು.
ತಲಪಾಡಿಯ ಸಿದ್ದಿಕ್ ಎಂಬವರು ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿ ಮಿತಿ ಮೀರಿದ್ದು, ಪೊಲೀಸರು ಡ್ರಗ್ಸ್ ಮಾರಾಟಗಾರರನ್ನು ಬಂಧಿಸುತ್ತಾರೆ. ಆದರೆ, ಪೆಡ್ಲರ್ ಗಳನ್ನು ಬಂಧಿಸುವ ಪ್ರಯತ್ನ ಮಾಡುವುದಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್, ನಾವು ಈ ವಿಚಾರದಲ್ಲಿ ಸುಮ್ಮನೆ ಕುಳಿತಿಲ್ಲ. ಡ್ರಗ್ ಪೆಡ್ಲರ್ ಗಳ ಹಿಂದೆಯೂ ನಾವು ಬಿದ್ದಿದ್ದೇವೆ. ಆದರೆ, ಕೆಲವೊಂದು ವಿಚಾರಗಳನ್ನು ನಾವು ಮಾಧ್ಯಮಗಳಿಗೆ, ಸಾರ್ವಜನಿಕರಿಗೆ ತಿಳಿಸುವ ಹಾಗಿಲ್ಲ ಎಂದು ಹೇಳಿದರು.
ನಗರದ ಅಲೋಶಿಯಸ್ ಕಾಲೇಜು ಮುಂಭಾಗದ ಬಸ್ ತಂಗುದಾಣದಲ್ಲಿ ಬಸ್ ಬೇ ಇಲ್ಲ. ಹೊಯಿಗೆ ಬಝಾರ್ ರೈಲ್ವೇ ಗೇಟ್ ಬಳಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ, ಪೊಲೀಸ್ ಕ್ವಾಟರ್ಸ್ ಬಳಿ ಒಂಬತ್ತು ಡೇಂಜರಸ್ ಹಂಪ್ಸ್ ಗಳಿವೆ. ಬೋಂದೆಲ್ನ ಸರ್ವಜ್ಞ ವೃತ್ತದ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕಪ್ಪು ಪೆಯಿಂಟ್ ಬಳಿದಿರುವ ಈ ವೃತ್ತ ರಾತ್ರಿ ವೇಳೆ ವಾಹನದಲ್ಲಿ ಬರುವವರಿಗೆ ಕಾಣುವುದಿಲ್ಲ. ಪೊರ್ಕೊಡಿಯಲ್ಲಿ ಹಂಪ್ಸ್ ಅಳವಡಿಸಬೇಕು, ಬಜ್ಪೆ ರಸ್ತೆ ಕಾಮಗಾರಿ ಚುರುಕುಗೊಳಿಸಿ ಎಂಬಿತ್ಯಾದಿ ದೂರುಗಳು ಕೇಳಿ ಬಂದಿತು. ಪೊಲೀಸ್ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ತಕ್ಷಣ ಸಮಸ್ಯೆ ಬಗೆಹರಿಸುತ್ತೇವೆ. ಉಳಿದ ದೂರುಗಳನ್ನು ಆಯಾ ಇಲಾಖೆಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಪಡುತ್ತೇವೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಹೇಳಿದರು.
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ: MDMA(ಮೀಥೈಲೆನೆಡಿಯಾಕ್ಸಿ ಮೆಥಾಂಫೆಟಮೈನ್) ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ ಒಟ್ಟು 70,000 ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ತಾಲೂಕಿನ ಪೆರ್ಮನ್ನೂರು ಗ್ರಾಮದ ಮೊಹಮ್ಮದ್ ಇರ್ಷಾದ್ (28) ಬಂಧಿತ ಆರೋಪಿ.
ಇದನ್ನೂ ಓದಿ: ಪುತ್ತೂರಿನಲ್ಲಿ ಮತ್ತೆ ಝಳಪಿಸಿದ ತಲವಾರು: ಪುತ್ತಿಲ ಪರಿವಾರದವನ ಮೇಲೆ ಹಲ್ಲೆಗೆ ಯತ್ನ