ಮಂಗಳೂರು : ಆರ್ಥಿಕವಾಗಿ ಹಿಂದುಳಿದ ಮೀನುಗಾರರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ಸವಾಹಿನಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ರಾಜ್ಯಕ್ಕೆ 300 ಮೀನು ಮಾರಾಟ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಸಿಕ್ಕಿದ್ದು, ಶೀಘ್ರ ಅರ್ಹ ಮೀನುಗಾರ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ತೀರ್ಥರಾಮ ಎ.ವಿ. ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಗಮದಿಂದ ಖರೀದಿಸಿದ ಮೀನುಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ಸಾಗಿಸಲು ಈ ವಾಹನಗಳನ್ನು ಬಳಸಲಾಗುತ್ತಿದೆ. ಮೀನುಗಾರರು ವಾಹನಗಳನ್ನು ಸಹಾಯಧನ ಮತ್ತು ಸಾಲ ಯೋಜನೆಯಡಿ ಪಡೆಯಬಹುದು ಎಂದು ತಿಳಿಸಿದರು.
ಮೀನುಗಾರ ಮಕ್ಕಳಿಗೆ ವಿದ್ಯಾನಿಧಿ: ರೈತರ ಮಕ್ಕಳ ಮಾದರಿಯಲ್ಲಿ ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ವಿತರಿಸಲು 50 ಕೋಟಿ ರೂಪಾಯಿ ಮೀಸಲಿಡುವುದಾಗಿ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಒಳನಾಡು ಮೀನುಗಾರರ ಪ್ರತಿಯೊಬ್ಬರಿಗೂ 250 ಮೀನಿನ ಮರಿ ಉಚಿತವಾಗಿ ವಿತರಿಸುವ ಯೋಜನೆಯಿದೆ. ಮೀನು ಕೃಷಿಗೆ 2 ಲಕ್ಷ ರೂ. ವರೆಗೆ ಸಾಲವೂ ದೊರಕಲಿದೆ. ಮೀನುಗಾರರಿಗೆ 5 ಸಾವಿರ ಮನೆ ನಿರ್ಮಿಸಲು ಅನುದಾನ ಬಿಡುಗಡೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ನಾಟಿಕಲ್ ಮೈಲು ಮೀನುಗಾರಿಕೆಗೆ 5 ಲಕ್ಷ ರೂ ದಂಡ.. ರಾಜ್ಯದ 12 ನಾಟಿಕಲ್ ಮೈಲು ವ್ಯಾಪ್ತಿಯ ಸಾಗರ ಪ್ರದೇಶದ ಒಳಗಡೆ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಅನ್ಯ ರಾಜ್ಯದ
ಮೀನುಗಾರರಿಗೆ ವಿಧಿಸುವ ದಂಡ ಪ್ರಮಾಣವನ್ನು 1 ಲಕ್ಷ ರೂ.ಗಳಿಂದ 3-5 ಲಕ್ಷ ರೂ. ವರೆಗೆ ಏರಿಕೆ ಮಾಡಲಾಗಿದೆ ಎಂದು ತೀರ್ಥರಾಮ ವಿವರಿಸಿದರು.
ಇದನ್ನೂ ಓದಿ:ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ