ಮಂಗಳೂರು: ನಗರದಲ್ಲಿ ಡಿ.19ರಂದು ನಡೆದ ಗೋಲಿಬಾರ್ ಪ್ರಕರಣವನ್ನು ವಿರೋಧಿಸಿ, ಎನ್ಆರ್‌ಸಿ - ಸಿಎಎಯನ್ನು ತಿರಸ್ಕರಿಸಿ ಮಂಗಳೂರಿನ ಪುರಭವನದ ಮುಂಭಾಗ ಇಂದು ಸಾಮೂಹಿಕ ಧರಣಿ ನಡೆಯಿತು.
ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಐಎಂ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ದ.ಕ.ಜಿಲ್ಲಾ ಸಮಿತಿಗಳ ಜಂಟಿ ಆಶ್ರಯದಲ್ಲಿ ಈ ಸಾಮೂಹಿಕ ಧರಣಿ ನಡೆಯಿತು. ರ್ಯಾಲಿಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಈ ಸಾಮೂಹಿಕ ಧರಣಿಯನ್ನು ನಡೆಸಲಾಯಿತು. ಈ ಧರಣಿಯು ಇಡೀ ದಿನ ನಡೆಯಲಿದ್ದು, ಮಂಗಳೂರಿನಲ್ಲಿ ಮತ್ತೆ ಎನ್ಆರ್‌ಸಿ, ಸಿಎಎ ವಿರುದ್ಧ ಮತ್ತೆ ಧ್ವನಿ ಮೊಳಗಿದೆ.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಎನ್ಆರ್‌ಸಿ, ಸಿಎಎಯನ್ನು ವಿರೋಧಿಸಿ ನಡೆಸುತ್ತಿರುವ ಜನರ ಮುಖವಾಣಿಯಾಗಿರುವ ಇಂದಿನ ಈ ಚಳುವಳಿ ದೇಶದ ಎರಡನೇ ಸ್ವಾತಂತ್ರ್ಯ ಚಳುವಳಿಯಾಗಿದೆ. ಮಂಗಳೂರಿನಲ್ಲಿ ನಡೆಸಿದ ಗೋಲಿಬಾರ್ನಿಂದ ಅಮಾಯಕರ ಬಲಿಗೆ ರಾಜ್ಯದ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇರ ಹೊಣೆ. ಈ ಕೃತ್ಯದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕಾಗಿದೆ. ಆದ್ದರಿಂದ ನಮಗೆ ಮ್ಯಾಜಿಸ್ಟ್ರೇಟ್ ತನಿಖೆ ಬೇಡ, ಸಿಐಡಿ ತನಿಖೆಯೂ ಬೇಡ, ನ್ಯಾಯಾಂಗ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಧರಣಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ಮಾಜಿ ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರವಿಕಿರಣ್ ಪುಣಚ ಸೇರಿ ಇನ್ನೂರೈವತ್ತಕ್ಕೂ ಅಧಿಕ ಮಂದಿ ವಿವಿಧ ಪಕ್ಷದ, ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.