ಬೆಳ್ತಂಗಡಿ: ಪಟ್ಟಣ ಪಂಚಾಯತ್, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಾಲೂಕಿನಲ್ಲಿಂದು ಮಾಸ್ಕ್ ಡೇ ಅಂಗವಾಗಿ ಜನಜಾಗೃತಿ ಪಾದಯಾತ್ರೆ ಆಯೋಜಿಸಲಾಗಿತ್ತು.
ಕೋವಿಡ್-19 ಸಂಕಷ್ಟದ ಕಾಲದಲ್ಲಿ, ಸ್ವಯಂ ಆರೋಗ್ಯ ರಕ್ಷಣೆಗಾಗಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ನಿಯಮ ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಕೊರೊನಾ ತಡೆಗಟ್ಟಲು ಹಾಗೂ ಸೋಂಕು ಹರಡದಂತೆ ನಿಯಂತ್ರಿಸಲು ಸಾಧ್ಯವಿದೆ. ಕೊರೊನಾ ಸೋಂಕಿನ ಬಗ್ಗೆ ಭಯ ಬೇಡ, ಆದರೆ ಎಚ್ಚರವಿರಲಿ ಎಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ವಿದ್ಯಾವತಿ ಕರೆ ನೀಡಿದರು.
ಜನಜಾಗೃತಿ ಜಾಥಾ, ಮುಖ್ಯರಸ್ತೆಯ ಚರ್ಚ್, ಬಸ್ ತಂಗುದಾಣದಿಂದ ಹೊರಟು ಮುಖ್ಯ ಬಸ್ ನಿಲ್ದಾಣದವರೆಗೆ ಸಾಗಿ ಬಂತು. ಈ ವೇಳೆ ನಾವೆಲ್ಲರೂ ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದು, ವೈಯಕ್ತಿಕ ಅಂತರವನ್ನು ಕಾಪಾಡುವುದು. ಈ ಎಲ್ಲ ವಿಧಾನಗಳನ್ನು ಪ್ರತಿನಿತ್ಯ ಅಳವಡಿಸಿಕೊಳ್ಳುವುದಾಗಿ ಪ್ರತಿಜ್ಙೆ ಕೈಗೊಳ್ಳಲಾಯಿತು. ಪ್ರತಿಜ್ಞಾ ವಿಧಿಯನ್ನು ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಬೋಧಿಸಿದರು.