ಕಾಸರಗೋಡು(ಕೇರಳ) : ಸುಳ್ಯದಿಂದ ಕಾಸರಗೋಡಿನ ಪಾಣತ್ತೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಇಬ್ಬರು ಮಕ್ಕಳು ಸೇರಿದಂತೆ 8 ಜನ ದಾರುಣವಾಗಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಪಾಣತ್ತೂರು ಕಲ್ಲಪ್ಪಳ್ಳಿ ಬಳಿ ನಡೆದಿದೆ.
ಮೃತರು ಸುಳ್ಯ-ಪುತ್ತೂರಿನವರು:
ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಮತ್ತು ಪುತ್ತೂರಿನ ನಿವಾಸಿಗಳಾದ ರಾಜೇಶ್, ರವಿ ಚಂದ್ರನ್, ಸುಮತಿ, ಜಯಲಕ್ಷ್ಮಿ, ಶ್ರೇಯಸ್ ಮತ್ತು ಆದರ್ಶ್ ಮತ್ತು ಇತರರು ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾದ 29 ಮಂದಿಯ ಪೈಕಿ ಎಂಟು ಮಂದಿಯನ್ನು ಪರಿಯಾರಂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಮತ್ತು ಎಂಟು ಮಂದಿಯನ್ನು ಮಂಗಳೂರಿಗೆ ಸ್ಥಳಾಂತರಿಸಲಾಗಿದೆ. ಮೃತದೇಹಗಳನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆ ಮತ್ತು ಪೂಡಂಕಲ್ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ.
ಮದುವೆ ಸಂಭ್ರಮದಲ್ಲಿದ್ದವರ ದುರಂತ ಅಂತ್ಯ:
ಪುತ್ತೂರಿನ ಸುರಕ್ಷಾ ಸಂಸ್ಥೆಯ ಖಾಸಗಿ ಬಸ್ ಮದುವೆ ಸಮಾರಂಭಕ್ಕೆಂದು ಜನರನ್ನು ಕರೆದೊಯ್ಯುತ್ತಿದ್ದ ವೇಳೆ ಪಾಣತ್ತೂರು ಕಲ್ಲಪ್ಪಳ್ಳಿ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ರಸ್ತೆ ಬದಿಯ ಮನೆಗೂ ಡಿಕ್ಕಿ ಹೊಡೆದಿದೆ.
ಘಟನೆ ಕುರಿತು ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಸಾರಿಗೆ ಸಚಿವ ಎ.ಕೆ ಶಶೀಂದ್ರನ್ ಸಂತಾಪ ಸೂಚಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲು ಕಾಸರಗೋಡು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಮತ್ತು ತುರ್ತು ವರದಿ ಸಲ್ಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನಿರ್ದೇಶನ ನೀಡಿದ್ದೇನೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ಈ ಮಧ್ಯೆ ಘಟನೆ ಬಗ್ಗೆ ತನಿಖೆ ನಡೆಸಲು ಕಾಞಂಗಾಂಡ್ ಉಪ-ವಿಭಾಗಾಧಿಕಾರಿಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳ ಕೇರಳ ರಾಜ್ಯದಲ್ಲಿರುವುದರಿಂದ ಕಾಸರಗೋಡು ಜಿಲ್ಲೆಯ ರಾಜಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.